ಎಲ್ಲ ರೈತರ ಜೋಳಗಳನ್ನು ಖರೀದಿಸಲು ಒತ್ತಾಯಿಸಿ ಮುಂದುವರೆದ ಪ್ರತಿಭಟನೆ
ಶಿಗ್ಗಾವಿ 01 : ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆಯಲಾದ ಬಿಳಿಜೋಳ ಖರೀದಿ ಕೇಂದ್ರದಲ್ಲಿ ಕಪ್ಪಾದ ಜೋಳ ಬಿಟ್ಟು ಚನ್ನಾಗಿರುವ ಜೋಳ ಮಾತ್ರ ಖರೀದಿಸಲಾಗುತ್ತಿದೆ, ಜೋಳ ಖರೀದಿಸುವುದಾದರೆ ಎಲ್ಲ ರೈತರ ಜೋಳಗಳನ್ನು ಖರೀದಿಸಿ ಎಂದು ರೈತರು ಪಟ್ಟು ಹಿಡಿದು ಮಂಗಳವಾರ ನಡೆದಿದ್ದ ರೈತರ ಪ್ರತಿಭಟನೆ ಮತ್ತೆ ಬುಧವಾರವೂ ಮುಂದುವರೆದ ಘಟನೆ ಜರುಗಿತು.
ಈ ಭಾರಿ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ತಾಲೂಕಿನಾದ್ಯಂತ ಜೋಳ ಹಾಲು ಕಟ್ಟುವ ಹಂತದಲ್ಲಿದ್ದಾಗ ಅಕಾಲಿನ ಮಳೆ ಸುರಿದ ಕಾರಣಕ್ಕೆ ವಾತಾವರಣದಲ್ಲಿ ತೇವಾಂಶ ಹೆಚ್ಚಾದ ಕಾರಣಕ್ಕೆ ಬೂಸ್ಟ್ ಬಂದು ಕಾಳು ಕಪ್ಪಾಗಿದೆ ಪ್ರಕೃತಿ ಮಾಡುವುದಕ್ಕೆ ರೈತರಿಗೆ ಏಕೆ ಬರೆ ? ಎಂದು ಪ್ರಶ್ನಿಸಿದರು ಇದಕ್ಕೆ ದನಿಗೂಡಿಸಿದ ರೈತರು ಜಿಲ್ಲಾಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದರು.
ನಂತರ ರೈತರ ಪರವಾಗಿ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ಶ್ರೀಕಾಂತ ದುಂಡಿಗೌಡ್ರ, ಜಿಲ್ಲಾಧಿಕಾರಿಗಳು ನೂರು ಗ್ರಾಂ ನಲ್ಲಿ ಒಂದು ಗ್ರಾಂ ಬಣ್ಣ ಬದಲಾಯಿಸಿದ್ದು ಮತ್ತು ರೋಗಗ್ರಸ್ಥ ಎಂದು ಇದ್ದರೆ ಖರೀದಿಸುವುದಿಲ್ಲ ಎನ್ನುತ್ತಾರೆ ಜೊತೆಗೆ ಎಫ್ಸಿಐ ದಿಂದ ಸುತ್ತೋಲೆ ಇದೆ ಎನ್ನುತ್ತಾರೆ ಆದರೆ ಕೇಂದ್ರ ಸರಕಾರ 1 ಗ್ರಾಂ ಬಣ್ಣ ಬದಲಾಸಿರುವ ಜೋಳವನ್ನಷ್ಟೆ ಖರೀದಿಸಲಿ ಮತ್ತು ರಾಜ್ಯ ಸರಕಾರ ಒಂದು ಗ್ರಾಂ ನಿಂದ ಐದು ಗ್ರಾಂ ಗೆ ಬಣ್ಣ ಬದಲಿಸಿದ ರೈತರ ಜೋಳ ಖರೀದಿಸಬೇಕು ಇದಕ್ಕೆ ನಮ್ಮ ಚುನಾಯಿತ ಜನಪ್ರತಿನಿಧಿಗಳ ಮತ್ತು ಸಂಭಂದಿಸಿದ ಕೃಷಿ ಸಚಿವರ ಇಚ್ಚಾಶಕ್ತಿ ಮುಖ್ಯವಾಗಿದೆ, ತಾಲೂಕಿನಲ್ಲಿ ರೈತರ ಪ್ರತಿಯೊಂದು ಸಮಸ್ಯೆಗೂ ಯಾವುದೇ ಸ್ಪಂದನೆ ಇಲ್ಲವಾಗಿದೆ ಇದು ನಮ್ಮ ಅನುಮಾನಕ್ಕೆ ಕಾರಣವಾಗಿದೆ ಕೂಡಲೇ ಸಂಭಂದಿಸಿದ ಸಚಿವರು ಇದಕ್ಕೆ ಕ್ರಮ ಜರುಗಿಸಬೇಕು ಎಂದರು.
ವಿಷಯ ತಿಳಿದು ಇಂದೂ ಸಹಿತ ಮತ್ತೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ, ರೈತರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲರಾಗಿ ಸುತ್ತೋಲೆ ಪ್ರಕಾರವೇ ಖರೀದಿಸಲಗುವುದು ಎಂದು ತಿಳಿಸಿದರು, ಒಟ್ಟಾರೆ ರೈತರ ಹೋರಾಟಕ್ಕೆ ಕಾರಣವಾದ ಜೋಳ ಖರೀದಿಯ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ.
ಕರ್ನಾಟಕ ರೈತ ಸಂಘದ ತಾಲೂಕಾಧ್ಯಕ್ಷ ಬಸಲಿಂಗಪ್ಪ ನರಗುಂದ, ಶಿವಳ್ಳಿ, ಸಂತೋಷ ಕಟಗಿ, ಮಂಜುನಾಥ ಹಾವೇರಿ, ಮಜೀದ್ ಮಾಳಗೀಮನಿ, ಪಾಂಡು ಖುರ್ಸಾಪುರ, ಸುರೇಶ ಮುಗಳಿ, ಚನ್ನಪ್ಪ ತೊಂಡೂರ ಹಾಗೂ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.