ನಾಡು ನುಡಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಹೊರಬೇಕು: ಸಾಹಿತಿ ಪಾಟೀಲ
ರಾಣೇಬೆನ್ನೂರು 07: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಜನಪದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಜೊತೆಗೆ ಕನ್ನಡ ಭಾಷೆ ಪರಂಪರೆ ನಾಡು ನುಡಿ ರಕ್ಷಣೆ ಮಾಡುವುದು ಕನ್ನಡಿಗರ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಸಾಹಿತಿ ಕವಿ ಚಂ.ಸು.ಪಾಟೀಲ ಹೇಳಿದರು.
ಅವರು ಇಲ್ಲಿನ ವಾಗೀಶ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ಹಾಗೂ ಹಾವೇರಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂದಿನ ನಮ್ಮ ಸಾಹಿತಿಗಳು ಸಾಮಾಜಿಕ ಚಿಂತಕರು, ಕವಿಗಳು ತಮ್ಮ ದೂರದೃಷ್ಟಿಯಿಂದ ಕನ್ನಡ ನುಡಿ ಸಂಸ್ಕೃತಿ ಉಳಿಸಿ ಬೆಳೆಸುವ ಮತ್ತು ಜನಾಂಗದಿಂದ ಜನಾಂಗಕ್ಕೆ ಹಸ್ತಾಂತರಿಸುವ ಸದುದ್ದೇಶವನ್ನಿಟ್ಟುಕೊಂಡು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಸಮಗ್ರ ಕನ್ನಡಿಗರ ಸ್ವಾಯತ್ತ ಸಂಸ್ಥೆಯಾಗಿ ಪ್ರತಿನಿದಿಸುತ್ತಿರುವುದು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ. ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ವಾಭಿಮಾನಿಗಳಾಗಬೇಕಿದೆ ಎಂದು ಕರೆ ನೀಡಿದರು.
ಕವಿ ಮನಸ್ಸು ಸೂಕ್ಷ್ಮ. ನೋಡಿದ್ದನ್ನು ತನ್ನ ಸೂಕ್ಷ್ಮ ಮನಸ್ಸಿನಿಂದ ಕಾವ್ಯಮಯವಾಗಿ ಪ್ರಾಸವನ್ನಾಗಿ ಮಾಡುವ ಗುಣಧರ್ಮ ಎಲ್ಲರಿಗೂ ಬರಲಾರದು. ಇದೂ ಸಹ ಸಂಗೀತದಂತೆ ಗಂಧರ್ವ ವಿದ್ಯೆ ಇದ್ದ ಹಾಗೆ. ಕವಿ ಪರಿಪಕ್ವವಾಗಬೇಕಾದರೆ ತಾನು ಗೀಚಿದ್ದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ವಿಮರ್ಶೆ ಮಾಡಬೇಕು. ಅಂದಾಗ ಮಾತ್ರ ತಾನು ರಚಿಸಿದ ಕವಿತೆ ಪರಿಪಕ್ವವಾಗಿ ಹೊರಬಂದು ಕಾವ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದು ಎಂದು ಕವಿ ಕಾವ್ಯ ಪರಂಪರೆ ಕುರಿತು ಸಾದ್ಯಾಂತವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ವೀರೇಶ್ ಜಂಬಿಗಿ ಅವರು, ಕನ್ನಡ ನಾಡು ನುಡಿ ಸಂಸ್ಕೃತಿ ಪ್ರತಿಯೊಬ್ಬರೂ ತಮ್ಮ ನಿತ್ಯದ ಬದುಕಿನಲ್ಲಿ ಕ್ಷಣಕಾಲವಾದರೂ ಅಳವಡಿಸಿಕೊಂಡು ಸಾಗಿದಾಗ ಮಾತ್ರ ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಾಗುವುದು ಎಂದ ಅವರು, ಪ್ರಸ್ತುತ ಕನ್ನಡಿಗರು ನಿರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಬೇಕಾದ ಇಂದಿನ ಅಗತ್ಯವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಸಾಗಿ ಬಂದ ದಾರಿ ಕುರಿತು ಹಿರೇಕೆರೂರ ಕನಕ ಗುರು ಪೀಠ ಪಿ.ಯು. ಕಾಲೇಜಿನ ಪ್ರಾಚಾರ್ಯ ಗುಡ್ಡಪ್ಪ ಮಾಳಗುಡ್ಡಪ್ಪನವರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಜೆ.ಎಂ.ಮಠದ, ಡಾ.ಕೆ.ಎಚ್.ಮುಕ್ಕಣ್ಣನವರ, ಬಿ.ಪಿ.ಶಿಡೇನೂರ, ಎ.ಬಿ.ರತ್ನಮ್ಮ, ಇಂದಿರಾ ಬಾರಂಗಿ, ಲತಾ ನಿಟ್ಟೂರ, ಜಗದೀಶ ಹುಳ್ಯಾಳ, ಪ್ರೇಮಕುಮಾರ ಬಿದರಕಟ್ಟಿ, ಬಸವರಾಜ ಡೊಳ್ಳಿನ, ಶಿವಾನಂದ ಬಿ.ಬಿ., ಜಿ.ಆರ್.ಜಗದೀಶ್, ಮಮತಾ ಸಾವಕ್ಕನವರ, ಕರಬಸಪ್ಪ ಜಂಬಿಗಿ, ಜಯಶ್ರೀ ಕಾಳೆ, ಮುತ್ತುರಾಜ ಸಾವಕ್ಕನವರ, ಶ್ರೀಧರ ಛಲವಾದಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಚನ್ನಬಸಪ್ಪ ನಾಡರ, ಮಹೇಶ ದೇವಗಿರಿಮಠ, ಡಾ.ಎಸ್.ಹನುಮಂತಪ್ಪ, ಶರೀಫಸಾಬ ಶರೀಪನವರ, ರೇಖಾ ರಾಮಾಳದ, ದ್ರಾಕ್ಷಾಯಣಿ ಊದಗಟ್ಟಿ, ಕವನಾ ಕೋಣನತಂಬಿಗಿ, ನೀಲಕಂಠಯ್ಯ ಓದೀಶೋಮಠ, ಕೃಷ್ಣಪ್ಪ ಸೊಪ್ಪಿನ, ಗುಡ್ಡಪ್ಪ ಚಟ್ರ್ರಮ್ಮನವರ, ಲಕ್ಷ್ಮೀ ಅಡಿಕೆ, ಕವಿತಾ ಸಾರಂಗಮಠ, ವಿದ್ಯಾವತಿ ಮಳಿಮಠ, ಮಂಜುಳಾ ಹಿರೇಬಿದರಿ, ರಮೇಶ ಬಡಿಗೇರ, ಪ್ರಶಾಂತ ಅಂಗಡಿ, ವಿ.ಎಂ.ಕೂಗನೂರಮಠ, ಆಂಜನೇಯ ಡಿ.ಕೆ., ಮಂಜುನಾಥ ಬೂದನೂರ, ಬಸವರಾಜ ಪೂಜಾರ, ಗೀತಾ ಸಾಲಿಮಠ, ಎನ್.ಬಿ.ಬಳಿಗಾರ, ಸುಭಾಷ ಕೋಡಬಾಳ, ವೀರಣ್ಣ ಕುರವತ್ತಿಗೌಡ, ಅರುಣಕುಮಾರ ನರಗುಂಡ, ಬಸವರಾಜ ಸಂಕಮ್ಮನವರ, ಮಾರುತಿ ತಳವಾರ ಸೇರಿದಂತೆ ಜಿಲ್ಲೆಯ 40ಕ್ಕೂ ಹಿರಿಯ ಮತ್ತು ಕಿರಿಯ ಕವಿಗಳು ತಮ್ಮ ಕವನಗಳನನು ವಾಚಿಸುವುದರ ಮೂಲಕ ಕವಿಗೋಷ್ಠಿಗೆ ಮತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಶಿಕ್ಷಕ ರಮೇಶ ಬಡಕರಿಯಪ್ಪನವರ ಸ್ವಾಗತಿಸಿದರು. ಖಜಾಂಚಿ ಎಚ್.ಎಸ್.ಮುದಿಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಮೇಟಿ, ಪ್ರಭಾಕರ ಶಿಗ್ಲಿ ನಿರೂಪಿಸಿದರು. ಜಗದೀಶ ಮಳಿಮಠ ವಂದಿಸಿದರು.