ಸಣ್ಣ ಹಿಡುವಳಿದಾರ ಕುಟುಂಬಕ್ಕೆ ಸೂಕ್ತ ಚಿಕಿತ್ಸೆ, ಪರಿಹಾರಕ್ಕೆ ಆಗ್ರಹ ರೈತರ ಪ್ರತಿಭಟನೆ
ಬುಳಾಪುರ ರೈತರ ಜಮೀನಿನಲ್ಲಿ ಚಿರತೆ ದಾಳಿ: ಸಾವು ಬದುಕಿನ ಮಧ್ಯ ಹೊರಾಡುತ್ತಿರುವ ಗದಿಗೆಪ್ಪ- ಕೃಷ್ಣಪ್ಪ
ರಾಣೀಬೆನ್ನೂರ.ಮಾ.25 ಚಿರತೆ ಧಾಳಿಗೆ ತುತ್ತಾಗಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಬಡ ರೈತರಿಗೆ ಸೂಕ್ತ ಚಿಕಿತ್ಸೆ ಮತ್ತು ಸೂಕ್ತ ಪರಿಹಾರ ನೀಡುವುದರ ಜೊತೆಗೆ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ನಗರದ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಸಂಬಂಧಿಸಿದ ಉಪಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ಅವರ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಅವರು ಮಾತನಾಡಿ ಕಳೆದ 22 ರಂದು ರಟ್ಟೀಹಳ್ಳಿ ತಾ.ನ ಬುಳ್ಳಾಪುರ ಗ್ರಾಮದ ಬಡ ರೈತರಾದ ಗದಿಗೆಪ್ಪ ಹಾಲಪ್ಪ ಎಳೆಹೊಳಿ ಮತ್ತು ಕೃಷ್ಣಪ್ಪ ಯಲ್ಲಪ್ಪ ಮೂಡಬಾಗಿಲ ಇವರು ರಾತ್ರಿ ಕೃಷಿ ಕಾಯಕದಲ್ಲಿ ತೊಡಗಿಕೊಂಡಾಗ ಏಕಾಏಕಿ ಇವರ ಮೇಲೆ ಚಿರತೆಯೊಂದು ಧಾಳಿ ನಡೆಸಿ ಜೀವದ ಹಂಗು ತೊರೆದು ಇಬ್ಬರು ಹೋರಾಡಿ ತಮ್ಮ ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಂದು ಧಾಳಿಯಿಂದ ತಪ್ಪಿಸಿಕೊಂಡು ಆತ್ಮರಕ್ಷಣೆ ಮಾಡಿಕೊಂಡಿದ್ದಾರೆ.
ಅದೃಷ್ಟವಸಾತ್ ಚಿರತೆ ಧಾಳಿಗೊಳಗಾದ ಇಬ್ಬರು ಪ್ರಾಣವನ್ನು ಕಳೆದುಕೊಳ್ಳದೆ ಇದೀಗ ಜೀವನ್ಮರಣದ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ. ಆದರೆ ಈ ಇಬ್ಬರಿಗೂ ಇಲಾಖೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕಾಯಿತು. ಇದನ್ನು ಅರಣ್ಯ ಇಲಾಖೆಯು ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿರುವುದು ಖೇದಕರ ಸಂಗತಿ ಎಂದು ವಿಷಾಧಿಸಿದ ಪಾಟೀಲ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಸಜ್ಜಿತವಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕಿಸಿ ಖರ್ಚುವೆಚ್ಚವನ್ನು ಅರಣ್ಯ ಇಲಾಖೆ ಭರಿಸಬೇಕು. ಚಿಕ್ಕ ಹಿಡುವಳಿದಾರರಾದ ಇವರ ಕುಟುಂಬದವರಿಗೆ ಸೂಕ್ತ ಪರಿಹಾರ ದೊರಕಿಸಬೇಕು. ಇದೀಗ ಚಿರತೆ ಧಾಳಿಯಿಂದ ಸ್ಥೈರ್ಯವನ್ನು ಕಳೆದುಕೊಂಡು ನಿತ್ರಾಣರಾಗಿರುವ ಈ ಇಬ್ಬರು ಯಾವುದೇ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಇವರಿಗೆ ಪರಿಹಾರ ದೊರಕಿಸಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಇತ್ತೀಚಿನ ಕೆಲವು ತಿಂಗಳಿಂದ ರಾಣೀಬೆನ್ನೂರ ತಾ.ನ ಮೇಡ್ಲೇರಿ ಭಾಗಗಳಲ್ಲಿ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು ಅದು ಅಂಕಸಾಪುರ, ಬೇಲೂರ, ಕರೂರ, ಐರಣಿ, ಆಲದಕಟ್ಟಿ ಮತ್ತಿತರೆ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ರೈತರು ವಾಹನ ಸವಾರರು, ಕೂಲಿಕಾರ್ಮಿಕರು, ಸಂಚಾರಿಗಳು ಅಂಗೈಯಲ್ಲಿ ಜೀವವನ್ನು ಇಟ್ಟುಕೊಂಡು ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇಲಾಖೆ ಗಮನಿಸಿ ಚಿರತೆಯನ್ನು ಸೆರೆ ಹಿಡಿಯುವುದಲ್ಲದೆ ಕಳೆದ ಬಾರಿ ಮುದೇನೂರ ಗ್ರಾಮದ ಬಡ ಕುರಿಗಾಯಿ ಹಿಂಡಿನ ಮೇಲೆ ಚಿರತೆಯೊಂದು ಧಾಳಿಮಾಡಿ 11 ಕುರಿಗಳನ್ನು ಕೊಂದು ಹಾಕಿದೆ. ಸರ್ಕಾರದಿಂದ ಇದುವರೆಗೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ, ಅವರಿಗೂ ಸೂಕ್ತ ಒದಗಿಸಬೇಕು, ಬುಳ್ಳಾಪುರದ ಈ ರೈತರಿಗೆ ಕೂಡಲೇ ದೊರಕಿಸಿ ಕುಟುಂಬಕ್ಕೆ ಆಶ್ರಯ ಆಗಬೇಕು ಎಂದು ಆಗ್ರಹಿಸಿರುವ ನಿರ್ಲಕ್ಷ ವಹಿಸಿದರೆ ನೊಂದ ಕುಟುಂಬಸ್ಥರೊಂದಿಗೆ ರಸ್ತೆಗಿಳಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ದಿಳ್ಳೆಪ್ಪ ಸತ್ಯಪ್ಪನವರ, ಹರಿಹರಗೌಡ ಪಾಟೀಲ, ಮರಡೆಪ್ಪ, ಉದಯ, ಬಾಬು, ಸಾವಕ್ಕ, ಹೇಮಂತ್, ಅಭಿನಯ, ರಕ್ಷಿತ, ಶ್ರೀನಿವಾಸರೆಡ್ಡಿ ಸೇರಿದಂತೆ ಸಂಘಟನೆಯ ರೈತ ಮುಖಂಡರು, ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.