ಜನಮನ ಸೂರೆಗೊಂಡ ಎಸ್ಪಿಬಿ ಗಾನನಮನ
ರಾಣೀಬೆನ್ನೂರು ನವೆಂಬರ್ 05: ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಪರಂಪರೆಗೆ ಭವ್ಯ ಇತಿಹಾಸವಿದೆ. ಕಲಾವಿದರ ತವರೂರಾದ ರಾಣೀಬೆನ್ನೂರು ನಗರದ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ರವಿವಾರ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಕರ್ನಾಟಕ ಸಂಘ ಮತ್ತು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ಕಲಾವಿದರ ದಂಡು ನೆರೆದು ನಾಡು-ನುಡಿ ಕಲೆ-ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರಸಾರಪಡಿಸಿ ಯಾವುದೇ ಕೊರೊನಾ ಬಂದರೂ ಕಲೆಗೆ ಮತ್ತು ಕಲಾವಿದರಿಗೆ ಆತಂಕವಿರಲಾರದು ಎನ್ನುವುದಕ್ಕೆ ಇಲ್ಲಿ ಪ್ರದರ್ಶನಗೊಂಡ ದಿ.ಎಸ್.ಪಿ.ಬಾಲಸುಭ್ರಮಣ್ಯಂ ಅವರ ಸ್ಮರಣೆಯಲ್ಲಿ ನಡೆದ ಎಸ್ಪಿಬಿ ಗಾನ ನಮನ ಕಾರ್ಯಕ್ರಮ ಸಾಕ್ಷೀಕರಿಸಿತು.
65ನೇ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ನಗರದ ಖ್ಯಾತ ವೈದ್ಯ ಡಾ.ಸಂಜೀವ ಮುದ್ರಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಜಾನಪದ ವಿದ್ವಾಂಸ ಕೆ.ಸಿ.ನಾಗರಜ್ಜಿ, ಉಪಾಧ್ಯಕ್ಷ ಕೊಟ್ರೇಶಪ್ಪ ಎಮ್ಮಿ, ವರ್ತಕ ಹನುಮಂತಪ್ಪ ಚಳಗೇರಿ, ಅಭಿರುಚಿ ಸಂಸ್ಥೆ ಕಾರ್ಯದರ್ಶಿ ಕೆ.ಎಸ್.ನಾಗರಾಜ, ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ, ಶಿವಕುಮಾರ ಜಾದವ ಸೇರಿದಂತೆ ಮೊದಲಾದ ಗಣ್ಯರು ಉಪಸ್ಥಿತರಿದ್ದು ಪರಿಪೂರ್ಣ ಯಶಸ್ವಿಗೆ ಸಹಕಾರಿಯಾಗಿದ್ದರು.
ಎಸ್ಪಿಬಿ ಗಾನ ನಮನ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕಲಾವಿದರಾದ ನಿನಾಸಂ ಇಸ್ಮಾಯಿಲ್, ಹನುಮಾನ್ ಬ್ರಾಸ್ಬ್ಯಾಂಡ್ ಆರ್ಕೆಸ್ಟ್ರಾದ ಬಸವರಾಜ ಸಾವಕ್ಕನವರ, ಮಮತಾ, ಅನಸೂಯಾ ರಾಠೋಡ, ವೀಣಾ ಬೋಸ್ಲೆ, ಪ್ರಕಾಶ ಗಚ್ಚಿನಮಠ, ಸೌಮ್ಯ ಕೆಂಪಣ್ಣನವರ, ಸಂಜೀವರೆಡ್ಡಿ ಪಾಟೀಲ, ಅಪ್ಜಲ್ಸಾಬ ಬ್ಯಾಡಗಿ, ಇಮಾಮಸಾಬ ಸೇರಿದಂತೆ ನಗರದ ಮತ್ತು ತಾಲೂಕಿನ ಜಿಲ್ಲೆಯ 20ಕ್ಕೂ ಹೆಚ್ಚು ಕಲಾವಿದರು ತಮ್ಮ ಕಲಾ ಕಂಠ ಸಿರಿಯಿಂದ ಎಸ್ಪಿಬಿ ಗೀತೆಗಳು-ಭಾವಗೀತೆ-ಜನಪದ ಗೀತೆ ಸೇರಿದಂತೆ ಮೊದಲಾದ ಸಂಗೀತಮಯ ಗಾಯನವನ್ನು ಹಾಡಿ ಶೋತೃಗಳನ್ನು ರಂಜಿಸಿ ಚಪ್ಪಾಳೆಗಳ ಸುರಿಮಳೆ ಪಡೆದು ಸಂಭ್ರಮಿಸಿದರು.5 ತಾಸುಗಳ ಕಾಲ ನಡೆದ ಎಸ್ಪಿಬಿ ಸುಮಧುರ ಗಾಯನ ನಮನ ಕಾರ್ಯಕ್ರಮದಲ್ಲಿ ನೂರಾರು ಪ್ರೇಕ್ಷಕರು ಮುಕ್ತಾಯದವರೆಗೂ ಸಾಕ್ಷಿಕರಿಸಿದರು. ಕಲಾವಿದೆ ಅನಸೂಯಾ ರಾಠೋಡ ಸಂಗಡಿಗರು ಪ್ರಾರ್ಥಿಸಿ, ಅಧ್ಯಕ್ಷ ನಿತ್ಯಾನಂದ ಕುಂದಾಪುರ ಸ್ವಾಗತಿಸಿ, ಶಿವಕುಮಾರ ಜಾದವ ನಿರೂಪಿಸಿ, ವಂದಿಸಿದರು.