ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವಕ್ಕೆ ಚಾಲನೆ
ಯರಗಟ್ಟಿ 31: ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ಅಗತ್ಯ. ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಲು ಎಲ್ಲಾ ರೀತಿಯ ಸಹಕಾರ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿ ಶಿಕ್ಷಕರು ಮಕ್ಕಳನ್ನು ಸ್ವಾಗತಿಸಿದರು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2024-2025ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು.ಶಾಲೆಯ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಮಾತನಾಡಿದ ಎಸ್ಡಿಎಂಸಿ ಅಧ್ಯಕ್ಷ ಸಿಂಕದರ ಚಾಂದಖಾನವರ ಅವರು 2024-25 ನೇ ಸಾಲಿನ ಶಾಲಾ ಆರಂಭದ ದಿನ ಮಕ್ಕಳನ್ನು ಸ್ವಾಗತಿಸಿ, ಎಲ್ಲಾ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಸಾಧನೆ ಮಾಡಬೇಕು. ಶಿಕ್ಷಣದಿಂದ ಯಾವುದೇ ಮಕ್ಕಳು ವಂಚಿತರಾಗಬಾರದು. ನೆರೆಹೊರೆಯಲ್ಲಿ ಯಾರಾದರೂ ಶಿಕ್ಷಣ ವಂಚಿತ ಮಕ್ಕಳು ಕಂಡುಬಂದಲ್ಲಿ ನಿಮ್ಮ ಸ್ನೇಹಿತರೆಂದು ತಿಳಿದು ಅವರನ್ನು ಶಾಲೆಗೆ ಕರೆದುಕೊಂಡು ಬನ್ನಿ ಎಂದು ಮಕ್ಕಳನ್ನು ಪ್ರೇರೇಪಿಸಿದರು ಹಾಗೂ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಶಿಕ್ಷಕರ, ಪೋಷಕರ ಸಹಕಾರ ಅಗತ್ಯ ಎಂದರು.ನಂತರ ಮಾತನಾಡಿದ ಎಸ್ಡಿಎಂಸಿ ಸದಸ್ಯ ಶಿವಾನಂದ ಬಳಿಗಾರ ಬರುವ ದಿನಗಳಲ್ಲಿ ಶಾಲೆಯಲ್ಲಿ 9 ಮತ್ತು 10ನೇ ತರಗತಿಗೆ ಮೇಲ್ದರ್ಜೆಗೇರಿಸಲು ಹೆಚ್ಚಿನ ಒತ್ತು ನೀಡಲಾಗುವುದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಸಮಸ್ಯೆ, ಗೊಂದಲ ಆಗದಂತೆ ಶಾಲಾ ಮಕ್ಕಳಿಗೆ ಆರಂಭದಲ್ಲಿ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲು ಯಾವುದೇ ರೀತಿಯ ತೊಂದರೆ ಆಗದಂತೆ ಈಗಾಗಲೇ ಪ್ರಧಾನ ಗುರುಗಳು ಸೂಚಿಸಿದ್ದೇವೆ ಎಂದು ಹೇಳಿದರು.
ಪ. ಪಂ. ಮುಖ್ಯಾಧಿಕಾರಿ ಡಿ ಎನ್ ತಹಶೀಲ್ದಾರ, ಶಾಲಾ ಮುಖ್ಯೋಪಾಧ್ಯಾಯ ಎ. ಎ. ಮಕ್ತುಮನವರ, ಎಸ್ ಡಿ ಎಂ ಸಿ ಸದಸ್ಯರಾದ ದೀಪಾ ಕಂಬಾರ, ಗದಿಗೆಪ್ಪ ಕಡಕೋಳ, ಶಿಕ್ಷಕರಾದ ಎಂ. ಎಂ. ಚೀಲದ, ಎಸ್. ಬಿ. ಮಿಕಲಿ, ಬಿ. ಎಂ. ಸರದಾರ, ಆರ್. ಕೆ. ಹುಣಶೀಕಟ್ಟಿ, ಎಸ್ ಎಸ್ ಕಿಣಗಿ, ವಿ. ಎಂ. ಹರ್ಲಾಪೂರ, ಎಸ್. ಎಸ್. ಹೊಸಮನಿ ಸೇರಿದಂತೆ ಅನೇಕ ಇದ್ದರು.