ಸಮಸ್ಯೆಗ್ರಸ್ತ ಕಾರದಗಾ ಪ್ರಾ.ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ
ಸಿಬ್ಬಂದಿಗಳ ಕೊರತೆ, ವೈದ್ಯಾಧಿಕಾರಿಗಳಿಲ್ಲದೆ ಪರದಾಡುತ್ತಿರುವ ಜನಸಾಮನ್ಯರು
ಮಾಂಜರಿ 28: ಸರಕಾರ ಬಡಜನರ ಆರೋಗ್ಯ ಸುಧಾರಣೆಗೆ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದರೂ ಅವುಗಳು ಜನರ ಬಳಿಗೆ ತಲುಪುತ್ತಿಲ್ಲ ಎಂಬುದಕ್ಕೆ ಇದ್ದು ಇಲ್ಲದಂತಿರುವ ಸಮೀಪದ ಕಾರದಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವೇ ಸಾಕ್ಷಿ. ವೈದ್ಯಾಧಿಕಾರಿಗಳು ಇಲ್ಲದಿರುವುದು, ಸಿಬ್ಬಂದಿಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು ಆರೋಗ್ಯ ಇಲಾಖೆ ಮೇಲಾಧಿಕಾರಿಗಳ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದ್ದು ಇಲ್ಲದಂತಾದ ಈ ಕೇಂದ್ರಕ್ಕೆ ಶಾಶ್ವತ ಚಿಕಿತ್ಸೆಬೇಕಾಗಿದೆ.
ಜನರು ಅನೇಕ ತೊಂದರೆಗಳನ್ನು ಹೊತ್ತು ಇಲ್ಲಿ ಬಂದರೆ ಇಲ್ಲಿ ಕಳೆದ 4 ತಿಂಗಳಿಂದ ವೈದ್ಯಾಧಿಕಾರಿ ಇಲ್ಲದ ಕಾರಣ ಜನಸಾಮಾನ್ಯರು ಪರದಾಡಬೇಕಾಗುವ ಪ್ರಸಂಗ ಬಂದೊದಗಿದೆ, ಇಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಇದ್ದು ಎಲ್ಲ ಜನರ ಸಮಸ್ಯೆಗೆ ಇವರೇ ಸ್ಪಂದಿಸಬೇಕಾಗಿದೆ. ಅನೇಕ ಹುದ್ದೆಗಳು ಖಾಲಿ ಇವೆ. ಗರ್ಭಿಣಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಯೋಗ್ಯ ಚಿಕಿತ್ಸೆ ಸರಿಯಾಗಿ ಸಿಗದೇ ಇರುವುದು ಜನರ ಕಂಗೆಣ್ಣಿಗೆ ಗುರಿಯಾಗಿದೆ.
ಇಲ್ಲಿ ಕಳೆದ ನಾಲ್ಕು ತಿಂಗಳಿಂದ ವೈದ್ಯರು ಇಲ್ಲದಿರುವುದು ಜನರ ಸಮಸ್ಯೆಗೆ ಕಾರಣವಾಗುತ್ತಲಿದ್ದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ. ವೈದ್ಯಾಧಿಕಾರಿ, ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ, ಕಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ, ಕಿರಿಯ ಪ್ರಯೋಗಶಾಲಾ ತಂತ್ರಾಧಿಕಾರಿ, ಪ್ರಥಮ ದರ್ಜೆ ಸಹಾಯಕ,
ಶುಶ್ರೂಷಕಿ ಇಬ್ಬರು ಹೀಗೆ 16 ರಲ್ಲಿ 9 ಜನ ಸಿಬ್ಬಂದಿ ಸ್ಥಾನ ಖಾಲಿಯಿದ್ದು, ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರು, ಬಡ ರೋಗಿಗಳು ಪರದಾಡುವಂತಾಗಿದೆ. ಕಾರದಗಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಪಚಾರ ಪಡೆಯಲು, ಕಾರದಗಾ, ಭೋಜ, ಢೋಣೆವಾಡಿ ಗ್ರಾಮಸ್ಥರು ಹಾಗೂ ಮಹಿಳೆಯರು ಉಪಚಾರ ಪಡೆಯಲು ಬರುತ್ತಾರೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಬಂದದಾರಿಗೆ ಸುಂಕವಿಲ್ಲಾ ಎಂಬಂತೆ ಮರಳಿಹೋಗುತ್ತಿದ್ದು, ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ವೈದ್ಯರನ್ನು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಕಾರದಗಾ, ಭೋಜ, ಢೋಣೆವಾಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.