ಧಾರವಾಡ - ಹುಬ್ಬಳ್ಳಿ

ಜನಸ್ನೇಹಿ, ಪಾರದರ್ಶಕ ಆಡಳಿತ ನೀಡಲು ಆಧ್ಯತೆ: ಸಚಿವ ಸಂತೋಷ ಲಾಡ

ಜನಸ್ನೇಹಿ, ಪಾರದರ್ಶಕ ಆಡಳಿತ ನೀಡಲು ಆಧ್ಯತೆ: ಸಚಿವ ಸಂತೋಷ ಲಾಡ

ಪ್ರತಿದಿನ ಜಿಲ್ಲೆಯ ಜನರ ಅಹವಾಲು ಆಲಿಕೆ; ಕಷ್ಟ ಸುಖಗಳಿಗೆ ಸ್ಪಂದನೆ;

ಕಲಘಟಗಿ 29: ತಾವು ಸಚಿವರಾದಾಗಿನಂದ ವಾರದ ಬಹುತೇಕ ದಿನಗಳನ್ನು ನನ್ನ ಮತಕ್ಷೇತ್ರ ಹಾಗೂ ಜಿಲ್ಲೆಯ ಜನರ ಮಧ್ಯದಲ್ಲಿದ್ದು, ಅವರ ದೂರು, ಅಹವಾಲುಗಳಿಗೆ ಪ್ರತಿದಿನ ಸ್ಪಂದಿಸುತ್ತಿದ್ದೇನೆ. ನಿತ್ಯ ಜನತಾದರ್ಶನ ನಡೆಸುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ, ಕಾರ್ಮಿಕ ಇಲಾಖೆ ಸಚಿವರು ಆಗಿರುವ ಕಲಘಟಗಿ ಶಾಸಕರಾದ ಸಂತೋಷ ಲಾಡ ಹೇಳಿದರು. 

ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಇತರ ಇಲಾಖೆಗಳ ಸಹೋಯಗದಲ್ಲಿ ಆಯೋಜಿಸಿದ್ದ ಜನ ಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

ಜನರ ಮಧ್ಯದಲ್ಲಿದ್ದು ಜನರ ಸಮಸ್ಯೆಗಳಿಗೆ ನಿತ್ಯ ಧ್ವನಿ ಆಗಿದ್ದೇವೆ. ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ, ಅಲ್ಲಿನ ಜನಪ್ರತಿನಿಧಿಗಳ, ಗ್ರಾಮಸ್ಥರೊಂದಿಗೆ ಗ್ರಾಮದ ಸಮಸ್ಯೆ, ಬೇಡಿಕೆಗಳನ್ನು ಚರ್ಚಿಸಿ, ಪರಿಹಾರ ಕಲ್ಪಿಸಲಾಗಿದೆ. ನಾನು ಒರ್ವ ಸಚಿವನಾಗಿ, ರಾಜ್ಯದಲ್ಲಿ ಮೊದಲ ಬಾರಿಗೆ ಮತಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ, ಸ್ವತಃ 28 ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಜನಸಂಪರ್ಕ ಸಭೆ ಜರುಗಿಸಿದ್ದೇನೆ ಎಂದು ಸಚಿವರು ತಿಳಿಸಿದರು. 

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಐದು ಜನಸಂಪರ್ಕ ಸಭೆಗಳನ್ನು ಜರುಗಿಸಿ, ಜನರ ಅಹವಾಲುಗಳನ್ನು ಸ್ವೀಕರಿಸಿ, ಶೇ.75 ರಷ್ಟು ದೂರುಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಗಿದೆ. ಇನ್ನುಳಿದವುಗಳು ಸರಕಾರ, ಇಲಾಖೆಗಳ ಹಂತದಲ್ಲಿ ಆಗಬೇಕಿದೆ. ಮತ್ತು ಕೆಲವು ನ್ಯಾಯಾಲಯ ಪ್ರಕರಣಗಳು ಇವೆ. ಇವುಗಳನ್ನು ಹಂತಹಂತವಾಗಿ ಪರಿಹರಿಸುವದಾಗಿ ಸಚಿವ ಸಂತೋಷ ಲಾಡ ಅವರು ಹೇಳಿದರು. 

ಸರಕಾರವೇ ಜನರ ಮನೆ ಬಾಗಿಲಿಗೆ ಹೋಗುತ್ತಿದೆ. ಅವರ ಬೇಕು, ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ಧಾರವಾಡ ಜಿಲ್ಲಾಡಳಿತ ಜನಸಂಪರ್ಕ, ಜನಸ್ಪಂದನೆ ಕಾರ್ಯಕ್ರಮಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಶ್ಲಾಘೀಸಿದರು. 

ಕಲಘಟಗಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 263 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಶೇ.40 ರಷ್ಟು ಅರ್ಜಿಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದೆ. ಉಳಿದಂತೆ ಬಹುತೇಕ ಅರ್ಜಿಗಳು ವಾಸಕ್ಕೆ ಮನೆ ಬೇಕು, ಜಮೀನು ಸರ್ವೆ ಮಾಡಿಸಿ, ಪೌತಿ, ಪೊಡಿಗಾಗಿ ಅರ್ಜಿ ಸಲ್ಲಿಕೆ ಆಗಿವೆ. ಇವುಗಳನ್ನು ಸಹ ಮುಂದಿನ ದಿನಗಳಲ್ಲಿ ನಿಯಮಾನುಸಾರ, ಕಾನೂನುಬದ್ದವಾಗಿ ಪರೀಶೀಲಿಸಿ , ಇತ್ಯರ್ಥ ಪಡಿಸಲಾಗುವುದು ಎಂದು ಸಚಿವರು ಹೇಳಿದರು. 

ವಿಶೇಷಚೇತನ ಕಂಡು ಕಣ್ಣಿರಾದ ಸಚಿವರು: ವಯಸ್ಕ ಮಗ ವಿಶೇಷಚೇತನನಿದ್ದು, ಏಳಲು, ಅಡ್ಡಾಡಲು ಬರುವದಿಲ್ಲ. ಮನೆಯ ಆರ್ಥಿಕ ಸ್ಥಿತಿ ಚನ್ನಾಗಿಲ್ಲ. ಮಗನನ್ನು ಸಾಕಿ, ಸಲುಹಲು ಸಹಾಯ ಮಾಡಿ ಎಂದು ವಿಶೇಷಚೇತನನ ತಾಯಿ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಇಂದಿನ ಜಿಲ್ಲಾಧಿಕಾರಿಗಳ ಜನಸ್ಪಂದನದಲ್ಲಿ ಉಸ್ತುವಾರಿ ಸಚಿವರಲ್ಲಿ ವಿನಂತಿಸಿದರು. 

ಅವರ ಪರಿಸ್ಥಿತಿ ನೋಡಿ, ಕಣ್ಣಿರಾದ ಸಚಿವ ಸಂತೋಷ ಲಾಡ ಅವರು, ತಮ್ಮ ಪೌಂಡೇಶನ್ ದಿಂದ ಸಹಾಯ ಮಾಡುವದಾಗಿ ತಿಳಿಸಿದರು. ಮತ್ತು ಆರೋಗ್ಯ, ಅಂಗವಿಕಲ ಕಲ್ಯಾಣ ಇಲಾಖೆಯಿಂದ ಯೋಜನಗಳ ಸಹಾಯ ಮಾಡಿಸುವದಾಗಿ ಸಚಿವರು ತಿಳಿಸಿದರು. ಅಗತ್ಯ ಚಿಕಿತ್ಸೆ, ಓಷಧಿ ನೀಡುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಎಂಬುವವರ ಮಗ ನಾಗರಾಜ ಅಂಗವಿಕಲನಿದ್ದು, ನಡೆದಾಡಲು ಬರುವುದಿಲ್ಲ. ತಾಯಿಯನ್ನು ಬಿಟ್ಟು ಆತನಿಗೆ ಯಾರು ಇಲ್ಲ. ಕಾರಣ ಸರಕಾರದಿಂದ ವಿಶೇಷ ಸೌಲಭ್ಯವನ್ನು ನೀಡಬೇಕು ಎಂದು ಕಸ್ತೂರಿ ಸೋಮಣ್ಣ ತುಂಬ್ರಿಕೊಪ್ಪ ಅವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಸಲ್ಲಿಸಿದ್ದರು. 

ಅನ್ನಭಾಗ್ಯ ಯೋಜನೆ ತಲುಪದ ಪಡೀತರದಾರರಿಗೆ ಆಧಾರ ಕೆವೈಸಿ ಅಭಿಯಾನ ಮಾಡಿ: ಅನ್ನಭಾಗ್ಯ ಯೋಜನೆಯ ನೇರ ನಗದು ಹಣ ಜಮೆ ಆಗದ ಪ್ರಕರಣಗಳಲ್ಲಿ ಆಧಾರ ಜೋಡಣೆಯ ಮತ್ತು ಬಾಂಕ್ ಹೊಸ ಖಾತೆ ತೆರೆಯಲು ಅನಕೂಲವಾಗುವಂತೆ ಆಯ್ದ ನಗರ ಹಾಗೂ ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಕೆವೈಸಿ ಜೋಡಣೆಯ ಸಲುವಾಗಿ ಜುಲೈ 1 ರಿಂದ 7 ರ ವರೆಗೆ ಸಪ್ತಾಹ ಅಭಿಯಾನ ಜಿಲ್ಲೆಯಲ್ಲಿ ಆಯೋಜಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ ಹೇಳಿದರು. 

ಜನಸ್ಪಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜನಸಂಪರ್ಕ, ಜನಸ್ಪಂದನಾ ಕಾರ್ಯಕ್ರಮಗಳ ಮೂಲಕ ಜಿಲ್ಲೆಯ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮವಹಿಸಲಾಗಿದೆ. ಸರಕಾರದ ಆಶಯದಂತೆ ಜನಸ್ನೇಹಿ, ಜನಪರ ಆಡಳಿತ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ.  

ತಾಲೂಕು, ಇಲಾಖೆಗಳ ಹಂತದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದಲ್ಲಿ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಂಪರ್ಕಿಸಬಹುದು. ಸರಕಾರದ ಯೋಜನೆಗಳ ಪ್ರಯೋಜನಗಳಿಗೆ ಅರ್ಹರಾದ ಎಲ್ಲ ಜನರಿಗೂ ತಲುಪಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಅವರು ಹೇಳಿದರು. 

ಜಿಲ್ಲೆಯಲ್ಲಿ ಜನಸ್ಪಂದನ ಯಶಸ್ವಿಯಾಗಿದೆ. ಜನರು ತಮ್ಮ ಕಂದಾಯ ಹಾಗೂ ಇತರ ಕಾರ್ಯಗಳಿಗಾಗಿ ಸರಕಾರಿ ಕಚೇರಿಗಳಿಗೆ ಅಲಿಯುವದನ್ನು ತಪ್ಪಿಸಿ, ಇಲಾಖೆ ಅಧಿಕಾರಿಗಳೇ ಜನರ ಬಳಿ ಹೋಗಿ, ಅವರ ಸಮಸ್ಯೆ ಬಗೆಹರಿಸುವ ಮಹತ್ವದ ಉದ್ದೇಶದಿಂದ ಈ ಜನಸ್ಪಂದನ, ಜನಸಂಪರ್ಕ ಕಾರ್ಯಕ್ರಮಗಳನ್ನು ಸರಕಾರ ಮಾಡುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. 

ಜನಸ್ಪಂದನ ಸಭೆಗಳಲ್ಲಿ ಸ್ವೀಕರಿಸುವ ಸಾರ್ವಜನಿಕ ಅರ್ಜಿಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ. ಅರ್ಜಿಯ ಸ್ಥಿತಿಗತಿಗಳನ್ನು ಜಿಲ್ಲಾ, ರಾಜ್ಯಮಟ್ಟದಲ್ಲಿ ಮತ್ತು ಮುಖ್ಯಮಂತ್ರಿಗಳ ಕಚೇರಿಯಿಂದ ಕಾಲಕಾಲಕ್ಕೆ ಪರೀಶೀಲಿಸಲಾಗುತ್ತದೆ. ಬರುವ ಜುಲೈ 15 ರೊಳಗೆ ಎಲ್ಲ ಸಾರ್ವಜನಿಕ ಅರ್ಜಿ, ಅಹವಾಲುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. 

ಆಧಾರ, ಆರ್‌.ಟಿ.ಸಿ ಜೋಡಣೆ ಶೇ.65 ರಷ್ಟು ಪ್ರಗತಿ: ರಾಜ್ಯ ಸರಕಾರ ಕಂದಾಯ ಇಲಾಖೆ ಮೂಲಕ ಕಂದಾಯ ದಾಖಲೆಗಳಲ್ಲಿ ಕಾಂತಿಕಾರಕ ಬದಲಾವಣೆಗಳನ್ನು ತರುವ ಮೂಲಕ ರೈತಸ್ನೇಹಿ ಗೊಳಿಸುತ್ತಿದೆ. ರೈತರ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ.65 ರಷ್ಟು ಆಧಾರ ಮತ್ತು ಆರ್‌.ಟಿ.ಸಿ ಜೋಡಣೆ ಆಗಿದೆ. ಕಲಘಟಗಿ ತಾಲೂಕಿನಲ್ಲಿ ಶೇ.64 ರಷ್ಟು ಆಗಿದೆ. ಉಳಿದ ರೈತರು ಈ ಮಹತ್ವದ ಯೋಜನೆಯಲ್ಲಿ ಭಾಗವಹಿಸಿ, ತಮ್ಮ ಆರ್‌.ಟಿ.ಸಿ, ಆಧಾರ್ ಜೋಡನೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಪೌತಿ ಅಭಿಯಾನ ಆಯೋಜನೆ: ರೈತರ ಪಹಣಿಗಳಿಗೆ ಆಧಾರ ಜೋಡಣೆ ಸಂದರ್ಭದಲ್ಲಿ ಇಲ್ಲಿವರೆಗೆ ಸುಮಾರು 30 ಸಾವಿರ ಪೌತಿ ಖಾತೆಗಳು ಪತ್ತೆ ಆಗಿವೆ. ಅನೇಕ ರೈತರು ನಿಯಮಾನುಸಾರ ಪಹಣಿ ಬದಲಾಯಿಸಿಕೊಳ್ಳದೇ, ಇನ್ನೂ ಪೌತಿ ಆದವರ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. 

ಆದ್ದರಿಂದ ರೈತರ ಅನಕೂಲಕ್ಕಾಗಿ ಜಿಲ್ಲಾಡಳಿತದಿಂದ ಪೌತಿ ಅಭಿಯಾನ ಮಾಡಿ, ಆಯಾ ಗ್ರಾಮಗಳ ಹಂತದಲ್ಲಿ ಪೌತಿ ಖಾತಾ ಬದಲಾವಣೆಗೆ ಅರ್ಜಿ ಸ್ವೀಕರಿಸಲು ಪೌತಿ ಅಭಿಯಾನ ಹಮ್ಮಿಕೋಳ್ಳಲಾಗುವುದು. ರೈತರು ಇದರ ಸದುಪಯೋಗ ಪಡೆಯಬೇಕೆಂದು ಅವರು ಹೇಳಿದರು. 

ಸಕಾಲಕ್ಕೆ ನೀರು, ಮೇವು ಪೂರೈಕೆ; ರೈತರಿಂದ ಡಿಸಿ ಸನ್ಮಾನ: ಇಂದಿನ ಕಲಘಟಗಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳಿಗೆ ಕಿವಿ ಆಗಲು ಬಂದಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ತಾಲೂಕಿನ ವಿವಿಧ ರೈತ ಸಂಘಟನೆಗಳ ಪ್ರಮುಖರು, ರೈತರು ಹಸಿರು ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು. 

ಕಳೆದ ಮೂರನಾಲ್ಕು ತಿಂಗಳು ಬಾಧಿಸಿದ್ದ ಬರಗಾಲ ಸಮಯದಲ್ಲಿ ರೈತರ ಮನವಿಗಳಿಗೆ ಸ್ಪಂದಿಸಿ, ಜನ,ಜಾನುವಾರುಗಳಿಗೆ ಅಗತ್ಯ ಕುಡಿಯುವ ನೀರು, ಮೇವು ಬ್ಯಾಂಕ್ ತೆರೆದು ರೈತರ ಬೇಡಿಕೆಗಳಿಗೆ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸಿದ್ದರು.  

ಇಂದು ಕಲಘಟಗಿ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳನ್ನು ಉಳವಪ್ಪ ಬಳಿಗಾರ, ನಿಜಗುಣಿ ಕೆಲಗೇರಿ, ರಾಮಣ್ಣ ಬಾರಕೇರ, ವಸಂತ ಡಾಕಪ್ಪನವರ, ಮಹಾದೇವ ಕಂಠೆಪ್ಪನವರ,ಯಲ್ಲಪ್ಪ ಧರೆಣ್ಣವರ ನೇತೃತ್ವದಲ್ಲಿ ರೈತರು ಡಿಸಿ ಅವರಿಗೆ ಗೌರವ ಸಲ್ಲಿಸಿದರು. ಡಿಸಿ ಕಾರ್ಯಗಳ ಕುರಿತು ವೇದಿಕೆಯಲ್ಲಿ ಮಾತನಾಡಿದರು. 

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ತಾಲೂಕಿನ ಉಸ್ತವಾರಿ ಅಧಿಕಾರಿ ಆಗಿರುವ ಹಿರಿಯ ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ಯಾನಪ್ಪಗೌಡ ಪಾಟೀಲ, ತಾಲೂಕು ಅಧ್ಯಕ್ಷ ಬಸವರಾಜ ಬಾವಕರ ಉಪಸ್ಥಿತರಿದ್ದರು. 

ಜನಸ್ಪಂದನ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಅಬಕಾರಿ ಜಿಲ್ಲಾ ಆಯುಕ್ತ ಕೆ.ಪ್ರಶಾಂತಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಟಿ.ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಬಿ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತೆ ಶ್ವೇತಾ ಸಂಗಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ ಜಲಗೇರಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ, ತಾಲೂಕುಮಟ್ಡದ ಅಧಿಕಾರಿಗಳು, ವಿವಿಧ ಗ್ರಾಮಗಳ ಜನಪ್ರತಿನಿಧಿಗಳು, ಗ್ರಾಮಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು. 

ಕಲಘಟಗಿ ಸರಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನೀಯರು ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಕಲಘಟಗಿ ತಹಶಿಲ್ದಾರ ಯಲ್ಲಪ್ಪ ಗೋಣೆನ್ನವರ ಸ್ವಾಗತಿಸಿದರು. ನಾಗಪ್ಪ ಮನ್ನಿಕೇರಿ ಕಾರ್ಯಕ್ರಮ ನಿರೂಪಿಸಿದರು. ವಂದಿಸಿದರು. 


ಸುದ್ದಿ ಓದಿ