ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ: ಶಾಸಕ ಬಳ್ಳಾರಿ
ಬ್ಯಾಡಗಿ 03: ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಾರ್ಡಗಳಲ್ಲಿಯೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಟ್ಟಣದ ಎಸ್’ಜೆಜೆಎಂ ತಾಲೂಕಾ ಕ್ರೀಡಾಂಗಣದಲ್ಲಿ ಶನಿವಾರ ಪುರಸಭೆಯ 15ನೇ ಹಣಕಾಸು ಯೋಜನೆಯಡಿ 9.44ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಅಳವಡಿಸಿರುವ ಪ್ಲೆಡ್ ಲೈಟ್’ನ್ನು ಬಟನ್ ಒತ್ತುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ತಾಲೂಕಿನ ಕ್ರೀಡಾಪಟುಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೇ ಪುರಸಭೆಯ ವಿವಿಧ ವಾರ್ಡ’ಗಳಲ್ಲಿ ರಸ್ತೆ,ಕಾಲುವೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ನಿವೇಶನ ರಹಿತ ಆಯ್ಕೆಗೊಂಡ ಫಲಾನುಭವಿಗಳಿಂದ 30 ಸಾವಿರ ರೂಗಳ ವಂತಿಗೆ ಹಣವನ್ನು ತುಂಬಿಸಿಕೊಳ್ಳಲಾಗುತ್ತಿದ್ದು, ವಂತಿಗೆ ಹಣ ತುಂಬಿದ ಫಲಾನುಭವಿಗಳಿಗೆ ಶೀಘ್ರದಲ್ಲಿ "ಜಿ ಪ್ಲಸ್" ಮನೆಗಳ ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗುವುದು ಎಂದರು ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ, ಪುರಸಭಾ ಸದಸ್ಯರಾದ ಬಸವಣ್ಣೆಪ್ಪ ಛತ್ರದ, ಶಿವರಾಜ ಅಂಗಡಿ, ಈರಣ್ಣ ಬಣಕಾರ, ಸುಭಾಸ ಮಾಳಗಿ, ವಿನಾಯಕ ಹಿರೇಮಠ, ಕಲಾವತಿ ಬಡಿಗೇರ, ಫಕ್ಕೀರಮ್ಮ ಚಲುವಾದಿ, ಮುಖ್ಯಾಧಿಕಾರಿ ಏಸು ಬೆಂಗಳೂರ ಹಾಗೂ ಪುರಸಭೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.