ಬೆಟಗೇರಿ ಸಿಆರ್ಸಿ ವಲಯದಲ್ಲಿ ಅದ್ಧೂರಿಯಾಗಿ ನಡೆದ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ
ಬೆಟಗೇರಿ 31: ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್ಸಿ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ತೋಟದ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಸನ್ 2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ಶಾಲಾ ಪ್ರಾರಂಭೋತ್ಸವ, ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮ ಮೇ.31 ರಂದು ಸಡಗರದಿಂದ ನಡೆಯಿತು.
ಬೆಟಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಸ್ಥಳೀಯ ಸಿಆರ್ಸಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಬಿ.ನಾಯ್ಕರ ಅವರು, ಅಕ್ಷರ ಬಂಡಿ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳಿಗೆ ಹೂ ಮತ್ತು ಸಿಹಿ ನೀಡಿ ಶಾಲೆಯ ಶಿಕ್ಷಕರು ಬರಮಾಡಿಕೊಂಡರು.
ಅಕ್ಷರ ಬಂಡಿಯ ಎತ್ತುಗಳನ್ನು ರಂಗು ರಂಗಿನ ಬಣ್ಣ ಬಳಿದು ಎತ್ತುಗಳ ಕೂಡುಗಳಿಗೆ ರೆಬ್ಬನ್ಗಳಿಂದ ಶೃಂಗರಿಸಿ, ಶಾಲೆಯ ಮುಖ್ಯ ಶಿಕ್ಷಕ ಬಂಡಿಯ ಯಜಮಾನನಾಗಿ, ಬಂಡಿಗಳಲ್ಲಿ ಶಾಲಾ ಮಕ್ಕಳನ್ನು ಕೂಡ್ರಿಸಿ, ಶಾಲಾ ಪ್ರಾರಂಭ, ಮಕ್ಕಳ ದಾಖಲಾತಿ ಸೇರಿದಂತೆ ಹಲವಾರು ಶಿಕ್ಷಣದ ಘೋಷ ವಾಕ್ಯಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಕೂಗುತ್ತಾ ಅಕ್ಷರ ಬಂಡಿ ಕಾರ್ಯಕ್ರಮ ನಡೆದ ಬಳಿಕ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಯಿತು.
ಮೂಡಲಗಿ ಶೈಕ್ಷಣಿಕ ವಲಯದ ಬೆಟಗೇರಿ ಸಿಆರ್ಸಿ ವಲಯ ವ್ಯಾಪ್ತಿಯ ಬೆಟಗೇರಿ, ಬಿಲಕುಂದಿ, ತಪಸಿ, ಕೆಮ್ಮನಕೋಲ, ನಿಂಗಾಪೂರ, ಬಗರನಾಳ ಸೇರಿದಂತೆ ಎಲ್ಲ ಸರ್ಕಾರಿ ಹಿರಿಯ ಮತ್ತು ಕಿರಿಯ ಹಾಗೂ ಎಲ್ಲಾ ಪ್ರಾಥಮಿಕ ತೋಟದ ಕಿರಿಯ ಕನ್ನಡ ಶಾಲೆಗಳಲ್ಲಿ ಮೇ.31ರಂದು ಬೆಳಗ್ಗೆ 10 ಗಂಟೆಗೆ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಅಕ್ಷರ ಬಂಡಿ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ನಡೆದ ಬಳಿಕ ಶಾಲಾ ಮಕ್ಕಳಿಗೆ ಸಿಹಿ, ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಬೆಟಗೇರಿ ಸಿಆರ್ಸಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಬಿ.ನಾಯ್ಕರ ತಿಳಿಸಿದ್ದಾರೆ.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಗಳ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು, ಉಭಯ ಶಾಲೆಗಳ ಎಸ್ಡಿಎಮ್ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಬಿಸಿಯೂಟ ಅಡುಗೆ ಸಿಬ್ಬಂದಿ, ಪಾಲಕರು, ಶಿಕ್ಷಣ ಪ್ರೇಮಿಗಳು, ಸ್ಥಳೀಯ ಗ್ರಾಪಂ, ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಸದಸ್ಯರು, ಅಕ್ಷರ ಬಂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.