ತಾಳಿಕೋಟಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸರ್ವಸಾಧಾರಣ ಸಭೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸರ್ವಸಾಧಾರಣ ಸಭೆ

ತಾಳಿಕೋಟೆ: ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರು ಈ ಯೋಜನೆಗಳಿಂದ ಸಂಘದಿಂದ ಪಡೆಯುವ ಸಾಲವನ್ನು ಬೇರಾವ ಉದ್ದೇಶಕ್ಕೂ ಬಳಸದೆ ಕೃಷಿ ಉದ್ದೇಶಕ್ಕೆ ಬಳಸಿಕೊಂಡು ಆತಿಕವಾಗಿ ಸಬಲರಾಗಬೇಕು ಎಂದು ವಿಜಯಪುರ ಡಿಸಿಸಿ ಬ್ಯಾಂಕನ ಮಾಜಿ ಉಪಾಧ್ಯಕ್ಷ ಬಿ. ಎಸ್‌. ಪಾಟೀಲ(ಯಾಳಗಿ) ಹೇಳಿದರು. 

ಅವರು ಬುಧುವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 80 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು. 

ಸಹಕಾರಿ ಸಂಘವು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 3ಲಕ್ಷದವರೆಗೆ ಸಾಲವನ್ನು ನೀಡುತ್ತಿದೆ. ನಮ್ಮ ರೈತರು ಆರ್ಥಿಕವಾಗಿ ಸಬಲರಾಗಬೇಕೆಂಬುದು ಇದರ ಉದ್ದೇಶವಾಗಿದೆ. ಸಾಲ ಪಡೆದುಕೊಳ್ಳುವಾಗ ಇರುವ ಮನಸ್ಥಿತಿ ಕೊಡುವಾಗಲೂ ಇರಬೇಕು. ಸಾಲಗಾರರು ಹಾಗೂ ಬ್ಯಾಂಕಿನ ಸಂಬಂಧ ಹೆಚ್ಚು ಅನೋನ್ಯವಾಗಿರಲಿ ಎಂದರು. 

ನಿವೃತ್ತ ಪ್ರಾಚಾರ್ಯ ಆರ್‌.ಎನ್‌.ಪಾಟೀಲ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾಗಿದೆ. ಸ್ವಾತಂತ್ರ್ಯಕ್ಕಿಂತ ಪೂರ್ವ ಬ್ರಿಟಿಷರು ರೈತರನ್ನು ಶೋಷಣೆಗೆ ಒಳಪಡಿಸಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ 1949ರಲ್ಲಿ ಇಂಥಹ ಸಂಘಗಳು ಹುಟ್ಟಿಕೊಂಡವು, ಇಂದು ರೈತರ ಬದುಕು ಶೋಚನೀಯವಾಗಿದೆ. ಅದಕ್ಕೆ ಕಾರಣ ಹಲವಾರು ಇದ್ದರೂ ದುಂದು ವೆಚ್ಚ ಅನಾವಶ್ಯಕ ಕಾರ್ಯಗಳಿಗೆ ಹಣವ್ಯಯಿಸುವುದು ಪ್ರಮುಖವಾಗಿವೆ ನಮ್ಮ ರೈತರು ಸ್ವಾವಲಂಬಿಗಳಾಗಬೇಕು ಆತ್ಮಹತ್ಯೆ ಪರಿಹಾರವಲ್ಲ ಎಂದರು. 

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಅಮೃತಮಹೋತ್ಸವದ ಅಂಗವಾಗಿ ಸಂಘದ 75 ವರ್ಷದ ಹಿರಿಯ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. 

ಕೈಲಾಸಪೇಠೆಯ ಬಸವಪ್ರಭುದೇವರು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಬ್ಯಾಂಕ ಅಧ್ಯಕ್ಷ ವ್ಹಿ. ಎ. ಹಜೇರಿ, ಸಂಘದ ಅಧ್ಯಕ್ಷ ಬಸವರಾಜ ಕುಂಬಾರ, ವ್ಯವಸ್ಥಾಪಕ ಶಂಕರಗೌಡ ಪಾಟೀಲ, ಉಪಾಧ್ಯಕ್ಷ ಡಿ.ಎಸ್‌.ಗೊಟಗುಣಕಿ, ನಿರ್ದೇಶಕರಾದ ಎಸ್‌.ಬಿ.ಇಲಕಲ್ಲ, ಸಿ.ಎಸ್‌.ದೇಸಾಯಿ, ಡಿ.ವಿ.ಪಾಟೀಲ, ಜಿ.ವಿ.ಮೂಲಿಮನಿ, ಪಿ.ಬಿ.ತಂಗಡಗಿ, ಎಸ್‌.ಆರ್‌.ಕಟ್ಟಿಮನಿ, ವಾಯ್‌.ಡಿ.ಬರದೇನಾಳ, ಜೆ.ಎಸ್‌.ಬಮ್ಮಗೊಂಡ, ಎನ್‌.ಎಮ್‌.ಗೊರಗುಂಡಗಿ, ವಿಡಿಸಿಸಿ ಬ್ಯಾಂಕ ಕ್ಷೇತ್ರ ಸಿಬ್ಬಂಧಿ ಆಯ್‌.ಕೆ.ಮಣೂರ, ವೃತ್ತಿಪರ ನಿರ್ದೇಶಕ ಬಿ.ಕೆ.ಯಡ್ರಾಮಿ, ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ