ಕಳಪೆ ಕಾಮಗಾರಿ: ಪ್ರಶ್ನಿಸಿದ ಜನ ಸಾಮಾನ್ಯರನ್ನು ಬಂಧಿಸುವ ಕಾರ್ಯ ಖಂಡನೀಯ
ಲೋಕದರ್ಶನ ವರದಿ
ಗೋಕಾಕ 29: ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದ ಜನ ಸಾಮಾನ್ಯರನ್ನು ಬಂಧಿಸುವ ಕಾರ್ಯವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಈ ಕಾರ್ಯವನ್ನು ಖಂಡಿಸುತ್ತೇವೆ ಎಂದು ಡಿಎಸ್ಎಸ್ನ ಬೆಳಗಾವಿ ವಿಭಾಗೀಯ ಸಂಚಾಲಕ ರಮೇಶ ಮಾದರ ಅವರು ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕುಡಚಿ ಮತಕ್ಷೇತ್ರದಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಜನ ಸಾಮಾನ್ಯರು ಶಾಸಕ ಪಿ. ರಾಜೀವ ಅವರನ್ನು ಪ್ರಶ್ನಿಸಿದಾಗ ಜನಸಾಮಾನ್ಯರನ್ನು ಕೂಡಲೇ ಬಂಧಿಸುವಂತೆ ಪೋಲಿಸ್ ಅಧಿಕಾರಿಗಳಿಗೆ ಹೇಳುವ ಶಾಸಕರು, ವಾಕ್ ಸ್ವಾಂತ್ರತ್ಯವನ್ನು ಹತ್ತಿಕ್ಕುವ ಕಾರ್ಯವನ್ನು ಮಾಡುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಿನದಿಂದ ದಿನಕ್ಕೆ ಹಿಟ್ಲರ್ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದೆ. ಇದು ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ದಲಿತ ಸಮುದಾಯಗಳಿಗೆ ಸೇರಿದ ಪ್ರದೇಶಗಳಲ್ಲಿ ಮಾಡಬೇಕಾದ ಎಸಿಪಿ/ಟಿಎಸ್ಪಿ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರ ನಡೆದಿದೆ. ದಲಿತರಿಗೆ ಸೇರಿದ ಸ್ಥಳಗಳನ್ನು ಬಿಟ್ಟು ಬೇರೆಡೆ ಕಾಮಗಾರಿಗಳನ್ನು ಕೈಗೊಂಡು ದಲಿತರಿಗೆ ಅನ್ಯಾಯ ಮಾಡುವ ಕಾರ್ಯ ಭರದಿಂದ ಸಾಗಿದೆ. ಇದನ್ನು ಖಂಡಿಸಿ ಮುಂಬರುವ ದಿನಗಳಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಮತಕ್ಷೇತ್ರಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.