ರಾಣೆಬೆನ್ನೂರ

ಕಳಪೆ ಮಟ್ಟದ ಕಾಮಗಾರಿ: ಕ್ರಮಕ್ಕೆ ಆಗ್ರಹ

ಕಳಪೆ ಮಟ್ಟದ ಕಾಮಗಾರಿ: ಕ್ರಮಕ್ಕೆ ಆಗ್ರಹ

ರಾಣಿಬೆನ್ನೂರ 21:  ನಗರಸಭೆಯ ವತಿಯಿಂದ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದ್ದು, ಗುಣಮಟ್ಟವಿಲ್ಲದ ವಿದ್ಯುತ್ ದೀಪ ಮತ್ತು ಇತರೆ ಉಪಕರಣಗಳನ್ನು ಪೂರೈಕೆ ಮಾಡುತ್ತಿದ್ದು, ಈ ಬಗ್ಗೆ ನಗರಸಭಾಧ್ಯಕ್ಷರು ಹಾಗೂ ಪೌರಾಯುಕ್ತರು ವಿಶೇಷ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಅಗತ್ಯ ಕ್ರಮ ಕೈಗೊಂಡು ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರುಗಳೇ ಗಂಭೀರವಾದ ಆರೋಪ ಮಾಡಿದ ಘಟನೆ ನಗರಸಭೆಯಲ್ಲಿ ಇಂದು ನಡೆಯಿತು.

ನಗರಸಭೆಯ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ನಗರಸಭಾ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರುಗಳಾದ ಪ್ರಕಾಶ ಬುರಡಿಕಟ್ಟಿ ಮತ್ತು ಮಲ್ಲಿಕಾರ್ಜುನ ಅಂಗಡಿ ಮತ್ತಿತರರು ಗಂಭೀರವಾಗಿ ಆರೋಪಿಸಿದರು.  ವಿವಿಧ ವಾರ್ಡಗಳಲ್ಲಿ ನಡೆದಿರುವ ರಸ್ತೆ, ಗಟಾರ, ಸಿಸಿ ಸಿಡಿ ಸಿಮೆಂಟಯುಕ್ತ ಕಾಮಗಾರಿಗಳು ಬಹಳಷ್ಟು ಕಳಪೆಯಾಗಿದ್ದು, ಇನ್ನೂ ವರ್ಷ ಪೂರೈಸಿಲ್ಲ, ಆಗಲೇ ಕೆಲ ಕಾಮಗಾರಿಗಳು ಹಾಳಾಗಿವೆ, ಇದರಿಂದ ನಗರಸಭೆಗೂ ಕೆಟ್ಟ ಹೆಸರಿನ ಜೊತೆಗೆ ಅನವಶ್ಯಕವಾಗಿ ಹಣ ಪೋಲಾಗುತ್ತಿದೆ ಎಂದವರು ಆರೋಪಿಸಿದರು.

ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ ದರ್ಪದಿಂದ ಮಾತಾಡುತ್ತಾರೆ. ರೆಹಮಾನಸಾಬ, ದಿಲ್ಲಿವಾಲ, ಗೋಂದಕರ ಸೇರಿದಂತೆ 12ಕ್ಕೂ ಅಧಿಕ ಗುತ್ತಿಗೆದಾರರು ಇಂತಹ ಕಳಪೆ ಗುಣಮಟ್ಟದ ಕಾಮಗಾರಿ ಕೈಗೊಂಡಿದ್ದರೂ ಸಹ ಇವರುಗಳಿಗೆ ನಗರಸಭೆಯ ಇಂಜನೀಯರಗಳ ಕುಮ್ಮಕ್ಕಿದೆ ಎಂಬುದು ಗೊತ್ತಾಗುತ್ತದೆ. ಈ ಬಗ್ಗೆ ಕುಲಂಕೂಷವಾಗಿ ತನಿಖೆ ಕೈಗೊಂಡು ಆದ ಕಾಮಗಾರಿಗಳನ್ನು ಪರಿಶೀಲಿಸಿ ಅವರುಗಳ ಮೇಲೆ ತುರ್ತು ಕ್ರಮ ಜಾರಿಗೊಳಿಸಿ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಲು ಸದಸ್ಯರುಗಳು ಆಗ್ರಹಿಸಿದರು.

ಈ ಮಧ್ಯ ಪೌರಾಯುಕ್ತ ಎನ್ ಮಹಾಂತೇಶ ಮತ್ತು ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿಯವರು ಕಾಮಗಾರಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ಪೆಬ್ರುವರಿ ಮತ್ತು ಮಾರ್ಚ ಮಾಹೆಯ ಜಮಾ-ಖರ್ಚು ಮಂಜೂರಿ, ವಿರೋಧ ಪಕ್ಷದವರಿಗೆ ಪ್ರತ್ಯೇಕ ಕೊಠಡಿ  ನೀಡಬೇಕು ಸೇರಿದಂತೆ ವಾಹನಗಳಿಗೆ ಡಿಸೆಲ್ ಪೂರೈಕೆ ಬಗ್ಗೆ ವಿರೋಧಪಕ್ಷದ ಸದಸ್ಯರಾದ ನಿಂಗಪ್ಪ ಕೋಡಿಹಳ್ಳಿ, ಶಶಿಧರ ಬಸೇನಾಯ್ಕರ, ಶೇಖಪ್ಪ ಹೊಸಗೌಡ್ರ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದಾಗ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರುಗಳ ಮಧ್ಯ ಭಾರಿ ಮಾತಿನ ಚಕಮಿಕಿ ನಡೆದು ಗದ್ದಲ ಗಲಾಟೆ ಉಂಟಾಗಿ ಸಭೆ ಕೋಲಾಹಲಗೊಂಡಿತು.

ಮಲ್ಲಣ್ಣ ಅಂಗಡಿ, ಪ್ರಕಾಶ ಪೂಜಾರ, ಹನುಂತಪ್ಪ ಹೆದ್ದೇರಿ, ಪ್ರಕಾಶ ಬುರಡಿಕಟ್ಟಿ ಮತ್ತಿತರರು ವಿಪ ಸದಸ್ಯರಿಗೆ ಪ್ರತ್ಯೇಕ ಕೊಠಡಿ ನೀಡಲು ಅವಕಾಶವಿಲ್ಲ, ನಗರಸಭೆಯಲ್ಲಿ ಅಧಿಕಾರಿಗಳು ಬಳಸುವ ವಾಹನಗಳಿಗೆ ವಾಹನಗಳ ಮಾಲಿಕರೇ ಎಲ್ಲವನ್ನು ನೋಡಿಕೊಳ್ಳುವ ಜವಾಬ್ದಾರಿ ಇದ್ದು, ಮನೆಮನೆ ಕಸ ವಿಲೇವಾರಿ ವಾಹನಗಳಿಗೆ ನಗರಸಭೆಯವರು ಡಿಸೆಲ್ ಹಾಕಿಸಬೇಕಾಗುತ್ತದೆ ಎಂದು ಸದಸ್ಯರುಗಳು ಸಮಜಾಯಿಸಿದರೂ ಇದಕ್ಕೆ ತೃಪ್ತರಾಗದ ವಿಪ ಸದಸ್ಯರುಗಳು ಮತ್ತಷ್ಟು ಗದ್ದಲದಲ್ಲಿ ತೊಡಗಿದಾಗ ಅನಿವಾರ್ಯವಾಗಿ ಅಧ್ಯಕ್ಷರು ಪೌರಾಯುಕ್ತರು ಮಧ್ಯ ಪ್ರವೇಶಿಸಿ ಸ್ಪಷ್ಠನೆ ನೀಡಿದಾಗ ಸಭೆ ಶಾಂತವಾಯಿತು.

24*7 ನೀರಿನ ಯೋಜನೆಗೆ ಔಷಧಿ ಖರೀದಿಗೆ 49 ಲಕ್ಷ ರೂ ಮಂಜೂರು ವಿಷಯ ಪ್ರಸ್ತಾಪಗೊಂಡಾಗ ಆಡಳಿತ ಪಕ್ಷದ ಸದಸ್ಯರೇ ಮತ್ತೆ ಆಕ್ಷೇಪ ಮಾಡಿ ಇನ್ನೂ ಪೂರ್ಣವಾಗಿ ಈ ಯೋಜನೆ ಜಾರಿಯಾಗಿಲ್ಲ, ಮಂಜೂರು ಬೇಡ ಎಂದಾಗ ಆಡಳಿತ ಮತ್ತು ವಿಪ ಸದಸ್ಯರುಗಳು ಒಟ್ಟಾಗಿ ಈ ವಿಷಯ ಚರ್ಚಿಸಿ ಮಂದೂಡಬೇಕೆಂದು ಪಟ್ಟು ಹಿಡಿದಾಗ ಯೋಜನೆಯ ಅಧಿಕಾರಿಗಳು ನೀಡಿದ ಸ್ಪಷ್ಠನೆಗೆ ಸದಸ್ಯರು ಒಪ್ಪದಿದ್ದಾಗ  ವಿಷಯ ಮುಂದೂಡಲಾಯಿತು. 

40ಕಾಮಗಾರಿಗಳಿಗೆ ಮಂಜೂರಾತಿ ವಿಷಯದ ಕುರಿತು ವಿಪ ಸದಸ್ಯರುಗಳು ಉಪಸೂಚನೆ ನೀಡಿ ಹಿಂಪಡೆದರು, ಈ ಮೊದಲು ಸಹಿ ಮಾಡಿಲ್ಲ ಸೂಚಕರ ಮತ್ತು ಅನುಮೋದಕರ ಸಹಿಯಾಗಿಲ್ಲ ಎಂದು ಅಧ್ಯಕ್ಷರು ವಿಷಯವನ್ನು ತಿರಸ್ಕೃತಗೊಳಿಸಿದರು. ಒಟ್ಟಾರೆ ಸಭೆ ಆರಂಭದಿಂದ ಅಂತ್ಯದವರೆಗೂ ಸಭೆಯ ಶಿಷ್ಠಾಚಾರವನ್ನು ಉಲ್ಲಂಘಿಸಿದ ಸದಸ್ಯರುಗಳು ಒಮ್ಮೆಲೆ  ಅನೇಕರು ಎದ್ದು ನಿಂತು ಮಾತನಾಡುತ್ತಿದ್ದುದು ಮುಜುಗರವೆನಿಸುತ್ತಿತ್ತು. ಜೊತೆಗೆ ಸಭೆಯ ಗೌರವ ಘನತೆಗೆ ಸದಸ್ಯರುಗಳು ದಕ್ಕೆ ತಂದದ್ದು ವಿಶೇಷವಾಗಿತ್ತು. ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿಯವರು ನಗರಸಭೆ ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಪೌರಾಯುಕ್ತ ಎನ್ ಮಹಾಂತೇಶ ಸೇರಿದಂತೆ ಅಧಿಕಾರಿಗಳು ಮತ್ತಿತರರು ಇದ್ದರು.

ಸುದ್ದಿ ಓದಿ