ಬಾಲಕಿಯರ ವಸತಿ ನಿಲಯದಲ್ಲಿ ಕಳಪೆ ಆಹಾರ: ಎಸ್ಎಫ್ಐ ಪ್ರತಿಭಟನೆ
ರಾಣೀಬೆನ್ನೂರ 18: ಇಲ್ಲಿನ ಕಮಲಾ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಗುಣ ಮಟ್ಟದ ಆಹಾರ ನೀಡುವಲ್ಲಿ ವಿಫಲರಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮರ್ಪಕ ಮತ್ತು ಉತ್ತಮ ಗುಣ ಮಟ್ಟದ ಆಹಾರ ವಿತರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಭಾರತ್ ವಿದ್ಯಾರ್ಥಿ ಫೆಡರೇಶನ್ ತಾಲೂಕ ಸಮಿತಿಯ ಕಾರ್ಯಕರ್ತರು ಇಲಾಖಾ ಕಚೇರಿ ಮುಂದೆ ಪ್ರತಿಭಟಿಸಿ ವಿಸ್ತೀರ್ಣಾಧಿಕಾರಿ ವಾಲ್ಮೀಕಿ ನಾಯಕ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಶ್ರೀಧರ ಛಲವಾದಿ ಅವರು ನಿಲಯದಲ್ಲಿ ಇರುವ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ವಿದ್ಯಾರ್ಥಿನಿಯರಿಗೆ ಸರಿಯಾದ ರೀತಿಯಲ್ಲಿ ಊಟ ಸಿಗುತ್ತಿಲ್ಲ ಮತ್ತು ನಿಗದಿತ ಸಮಯದಲ್ಲಿ ವ್ಯವಸ್ಥೆಯಾಗುತ್ತಿಲ್ಲ ಇದರಿಂದ ಬಹು ಆಸೆ ಇಟ್ಟುಕೊಂಡು ಶಿಕ್ಷಣ ಹೊಂದಬೇಕೆಂಬ ವಿದ್ಯಾರ್ಥಿಗಳಿಗೆ ತುಂಬಾ ನಿರಾಸೆಯಾಗುತ್ತಲಿದೆ. ಈ ಹಿಂದೆ ಇದೇ ವಿಚಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ವಾರ್ಡನ್ ಗಮನಕ್ಕೆ ತರಲು ಯತ್ನಿಸಿದರೆ ಅವರೂ ಸಹ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಸರಿಯಾದ ಸಮಯಕ್ಕೆ ಬರುವುದಿಲ್ಲವೆಂದು ಆರೋಪಿಸುತ್ತಾರೆ ಎಂದು ಸಲ್ಲಿಸಿರುವ ಮನವಿಯಲ್ಲಿ ಆರೋಪಿಸಿದ್ದಾರೆ.ಮನವಿ ಸಲ್ಲಿಕೆಯ ಮುಂಚೂಣಿಯಲ್ಲಿ ಸಹಕಾರ್ಯದರ್ಶಿ ಶ್ರೀಕಾಂತ್ ಬಾರ್ಕಿ, ಉಪಾಧ್ಯಕ್ಷ ಲಕ್ಷ್ಮಣ ಕೆಂಗಪ್ಪಳವರ, ನವೀನ ಕಾರ್ಕಳ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೆಚ್-ಆರ್ಎನ್ಆರ್06:- ಕಮಲಾ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಗುಣ ಮಟ್ಟದ ಆಹಾರ ನೀಡಲು ಆಗ್ರಹಿಸಿ ಎಸ್ಎಫ್ಐ ಕಾರ್ಯಕರ್ತರು ಪ್ರತಿಭಟಿಸಿದರು.