ಎಸ್ಎಫ್ಸಿ ಅನುದಾನದಲ್ಲಿ ಶಾಸಕರಿಂದ ರಾಜಕೀಯ-ಜಾತೀಯತೆ: ನಿಂಗರಾಜ ಕೋಡಿಹಳ್ಳಿ ಆರೋಪ
ರಾಣಿಬೆನ್ನೂರ 19: ನಗರದ ಅಭಿವೃದ್ಧಿಗಾಗಿ ಶಾಸಕರಾದ ಅರುಣಕುಮಾರ ಪೂಜಾರರವರು ಸರ್ಕಾರದಿಂದ ಎಸ್ಎಫ್ಸಿ ಅನುದಾನವನ್ನು ಬಿಡುಗಡೆ ಮಾಡಿಸಿರುವುದು ಸ್ವಾಗತಾರ್ಹವಾಗಿದ್ದು ಆದರೆ ಈ ಅನುದಾನವನ್ನು 35 ವಾರ್ಡಗಳಿಗೆ ಹಂಚುವ ಬದಲು ತಮ್ಮ ಪಕ್ಷದ-ತಮ್ಮ ಜಾತಿಯ ನಗರಸಭಾ ಸದಸ್ಯರ 3 ವಾರ್ಡಿಗೆ 5ಕೋಟಿ ರೂ. ಕಾಮಗಾರಿಗೆ ಮಂಜೂರಿ ಮಾಡಿದ್ದಾರೆ. ಶಾಸಕರ ಈ ನೀತಿಗೆ ನಮ್ಮದು ತೀವ್ರ ವಿರೋಧವಿದೆ. 35 ವಾರ್ಡಗಳಿಗೂ ಅನುದಾನ ಬಿಡುಗಡೆ ಮಾಡಬೇಕೆಂದು 18 ನಗರಸಭಾ ಸದಸ್ಯರು ಸಹಿ ಹಾಕಿ ಮನವಿ ಸಲ್ಲಿಸಿದ್ದರೂ ಕೂಡ ಪರಿಗಣಿಸದೆ ತಮ್ಮ ಇಚ್ಛಾನುಸಾರವಾಗಿ ವರ್ತಿಸಿರುವುದು ಬೇಸರ ತಂದಿದೆ.
ನಾವು ನಮ್ಮ ವಾರ್ಡಿಗೆ ಬಿಡುಗಡೆ ಮಾಡಿ ಎಂದು ಕೇಳುತ್ತಿಲ್ಲ, ಸಮಗ್ರ ನಗರಾಭಿವೃದ್ಧಿಗಾಗಿ 35 ವಾರ್ಡಗಳಿಗೂ ಅನುದಾನ ನೀಡಿರೆಂದು ಕೇಳಿದ್ದೇವೆ, ವಸ್ತು ಸ್ಥಿತಿ ಹೀಗಿದ್ದರು ನಗರಸಭಾಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ರಾಜಕೀಯ ಪ್ರೇರಿತ ಕಾನೂನು ಪಾಲನೆಯಾಘಿದೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಹಾಗೂ ಕೆಲ ಸದಸ್ಯರು ತಪ್ಪು ಗ್ರಹಿಕೆಯಿಂದ ಮನವಿಗೆ ಸಹಿ ಹಾಕಿದ್ದೇವೆಂದು ಹೇಳಿದ್ದಾರೆ. ಈ ಸದಸ್ಯರುಗಳು ಪೌರಾಯುಕ್ತರಿಗೆ ಲಿಖಿತವಾಗಿ ಏಕೆ ಹೇಳಿಕೆಯನ್ನು ನೀಡಿಲ್ಲ ಎಂದು ನಗರಸಭಾ ಸದಸ್ಯ ರಾದ ನಿಂಗರಾಜ ಕೋಡಿಹಳ್ಳಿ ಯವರು ಕೆ.ಬಿ.ಕೋಳಿವಾಡರವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
35 ವಾರ್ಡಗಳಿಗೂ ಎಸ್ಎಫ್ಸಿ ಅನುದಾನ ಬಿಡುಗಡೆ ಯಾಗಬೇಕೆಂದು ನಮ್ಮ ಉದ್ದೇಶ ವಾಗಿದ್ದು ಇದು ಸಾಕಾರವಾಗು ವವರೆಗೂ ಬಿಡುವುದಿಲ್ಲ. ನಾವು ಈಗಾಗಲೇ ಈ ಬಗ್ಗೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದು ಇದಕ್ಕೂ ನ್ಯಾಯ ಸಿಗದಿದ್ದರೆ ನ್ಯಾಯಾಲಯದಿಂದ ತಡೆಯಾಜ್ಞೆ ತರುವುದಾಗಿ ಅವರು ತಿಳಿಸಿದ್ದಾರೆ.