ಮರಳು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳದ ಆರಕ್ಷಕರು
ನ್ಯಾಯ ಪಡೆಯಲು ನ್ಯಾಯ ದೇವತೆಗೆ ಮೊರೆ..!
ರಾಣೇಬೆನ್ನೂರು 03: ರಾಣೇಬೆನ್ನೂರು ತಾಲೂಕಿನಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ದಂಧೆ ನಡೆಯುತ್ತಿದ್ದು ಇದರ ವಿರುದ್ಧ ದಾಖಲೆ ಸಮೇತ ದೂರು ನೀಡಿದಾಗ ಗ್ರಾಮೀಣ ಆರಕ್ಷಕ ಠಾಣೆಯ ಪೊಲೀಸರು ಯಾವುದೇ ಕ್ರಮ ಜರುಗಿಸದ ಬಗ್ಗೆ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ ತಾಲೂಕಿನ ಮೇಡ್ಲೇರಿ, ಕೋಣನತಂಬಿಗಿ, ಸೋಮಲಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಮರಳು ಮಾಫಿಯಾ ದಂಧೆ ನಡೆಯುತ್ತಿದೆ. ಈ ದಂಧೆಯಲ್ಲಿ ಖಾದರಸಾಬ್ ಬಡಿಗಿ ಹಾಗೂ ಹುಸೇನ್ ಮುಜಾವರ್ ಶಾಮೀಲಾಗಿರುವುದು ಸ್ಪಷ್ಟವಾಗಿದ್ದು, ಬಳ್ಳಾರಿಯ ಪರೀಶೀಲನಾ ತಂಡದವರು ಬಂದಾಗ ಸಾಕ್ಷಿಗಳೂ ಸಹ ದೊರಕಿವೆ. ಈ ಬಗ್ಗೆ ಗ್ರಾಮೀಣ ಆರಕ್ಷಕ ಠಾಣೆಯಲ್ಲಿ ಪರಿಸರವಾದಿಗಳು ದೂರು ದಾಖಲಿಸಿದ್ದರೂ ಕೂಡ ಆರಕ್ಷಕರು ಯಾವುದೇ ಕ್ರಮ ಜರುಗಿಸಿಲ್ಲ. ಮೇಲ್ನೋಟಕ್ಕೆ ಕೇಸು ದಾಖಲು ಮಾಡಿಕೊಳ್ಳುತ್ತಾರೆ. ನಂತರ ಎಫ್ಐಆರ್ ದಾಖಲಿಸುವುದಾಗಲೀ, ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಪಾಲಿಸುವುದಿಲ್ಲ.
ಸ್ಥಳ ಪರೀಶೀಲನೆಗೆ ಬಂದಾಗ ಹರನಗಿರಿ ವ್ಯಾಪ್ತಿಯಲ್ಲಿ ಮಾಫಿಯಾ ದಂಧೆ ನಡೆಸುವ ಮುಖ್ಯಸ್ಥನಿಂದ ಕಾರ್ಮಿಕರನ್ನು ಛೂ ಬಿಟ್ಟು ದೂರು ನೀಡಿದವರ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿತ್ತು. ಹಾಗೂ ಜೀವ ಬೆದರಿಕೆಯನ್ನೂ ಸಹ ಹಾಕಲಾಗಿದೆ. ಈ ಬಗ್ಗೆಯೂ ಕೂಡ ಗ್ರಾಮೀಣ ಠಾಣೆಗೆ ದೂರು ಸಲ್ಲಿಸಿದರೂ ಕೂಡ ಕ್ರಮ ಜರುಗಿಸಿಲ್ಲ. ಈ ಎಲ್ಲ ಘಟನೆಗಳನ್ನು ಅವಲೋಕಿಸಿದಾಗ ಕೆಲವು ಆರಕ್ಷಕರೇ ಮಾಫಿಯಾದ ಹಿಂದೆ ರಕ್ಷಕರಾಗಿ ನಿಂತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು ಈ ಬಗ್ಗೆ ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗುವುದಾಗಿ ಪರಿಸರವಾದಿ ಕೊಟ್ರೇಶಪ್ಪ ಕುದರಿಹಾಳ ತಿಳಿಸಿದ್ದಾರೆ.