ಕಳೆದು ಹೋದ 75 ಸಾವಿರ ಹಣವನ್ನು ಪತ್ತೆ ಹಚ್ಚಿದ ಪೊಲೀಸ ಇಲಾಖೆ
ತಾಳಿಕೋಟಿ 18: ತಾಲೂಕಿನ ಬಂಟನೂರ ಗ್ರಾಮದ ರೈತರಾದ ಲಕ್ಷ್ಮಣ ರಾಮಪ್ಪ ಚಲವಾದಿ ಎಂಬವರು ಪಟ್ಟಣದಲ್ಲಿ ಕಳೆದುಕೊಂಡ 75,000 ನಗದು ಹಣವನ್ನು ಸ್ಥಳೀಯ ಪೊಲೀಸ್ ಠಾಣೆ ಅಪರಾಧ ವಿಭಾಗದ ಪಿಎಸ್ಐ ಎಸ್ ಎಂ ಪಡಶೆಟ್ಟಿ ಹಾಗೂ ಅವರ ಸಿಬ್ಬಂದಿಗಳು ತನಿಖೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ತಾಳಿಕೋಟಿ ತಾಲೂಕಿನ ಬಂಟನೂರ ಗ್ರಾಮದ ರೈತ ಲಕ್ಷ್ಮಣ ರಾಮಪ್ಪ ಚಲವಾದಿ ಇವರು ದಿನಾಂಕ 12-11-2026 ರಂದು ಬೆಳಿಗ್ಗೆ 11 ಘಂಟೆಗೆ ತಾಳಿಕೋಟಿ ಪಟ್ಟಣದ ತರಕಾರಿ ಮಾರುಕಟ್ಟೆಗೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಬಳಿ ಇದ್ದ 75,000 ನಗದು ಹಣ ಇರುವ ಕೈಚೀಲವನ್ನು ಪಕ್ಕದಲ್ಲಿಟ್ಟು ತರಕಾರಿ ಖರೀದಿ ಮಾಡಿ ಮರಳುವಷ್ಟರಲ್ಲಿಯೇ ಹಣವಿದ್ದ ಅವರ ಕೈಚೀಲ ನಾಪತ್ತೆಯಾಗಿತ್ತು,
ಎಲ್ಲ ಕಡೆ ಹುಡುಕಿದರೂ ಸಿಕ್ಕಿರಲಿಲ್ಲ ಆಗ ತುಂಬಾ ಗಾಬರಿಗೊಂಡಿದ್ದ ಲಕ್ಷ್ಮಣ್ ಚಲವಾದಿ ಅವರು ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಅಪರಾಧ ವಿಭಾಗಕ್ಕೆ ಪ್ರಕರಣವನ್ನು ದಾಖಲಿಸಿದ್ದರು. ಅಪರಾಧ ವಿಭಾಗದ ಪಿಎಸ್ಐ ಆದಂತಹ ಎಸ್ ಎಂ ಪಡಶೆಟ್ಟಿಯವರು ತಮ್ಮ ಸಿಬ್ಬಂದಿಗಳೊಂದಿಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಕಳೆದು ಹೋದ ರೂ.75,000 ಸಾವಿರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ನಿನ್ನೆ ಅಂದರೆ ಮಂಗಳವಾರ (ದಿ. 17-11-2026) ರಂದು ವಶಪಡಿಸಿಕೊಂಡ ಹಣವನ್ನು ಅದರ ಮಾಲೀಕರಾದ ಲಕ್ಷ್ಮಣ ಚಲವಾದಿ ಇವರಿಗೆ ಮರಳಿಸಿದ್ದಾರೆ. ಅಪರಾಧ ವಿಭಾಗದ ಪಿಎಸ್ಐ ಎಸ್ಎಂ ಪಡಶೆಟ್ಟಿ ಹಾಗೂ ಅವರ ಸಿಬ್ಬಂದಿಗಳ ಈ ಕ್ರಿಯಾಶೀಲ ಕಾರ್ಯವು ಸಾರ್ವಜನಿಕರ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಹಣವನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದ ರೈತ ಲಕ್ಷ್ಮಣ ಚಲವಾದಿಯವರು ಅಪರಾಧ ವಿಭಾಗದ ಪಿಎಸ್ಐ ಪಡಶೆಟ್ಟಿ ಹಾಗೂ ಅವರ ಸಿಬ್ಬಂದಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.