ಎನ್ಎಸ್ಎಸ್ ಶಿಬಿರದಿಂದ ವ್ಯಕ್ತಿತ್ವ ವಿಕಸನ: ಕೃಷ್ಣಪ್ಪ
ತಾಳಿಕೋಟೆ24: ಮಹಾತ್ಮಾ ಗಾಂಧೀಜಿಯವರ ತತ್ವಗಳನ್ನೇ ಮಿಳಿತವಾಗಿರಿಸಿಕೊಂಡು ಪ್ರಾರಂಭವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯು ಜನರ ಮನಸ್ಸನ್ನು ರಾಷ್ಟ್ರೇ್ರಮ, ವ್ಯಕ್ತಿತ್ವ ವಿಕಸನ, ಭಾರತೀಯತ್ವವನ್ನು ಬೆಳೆಸುವ ಉದ್ದೇಶದಿಂದ ಪ್ರಾರಂಭವಾಗಿದ್ದು ಅದು ನಮ್ಮ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ಬೆಂಗಳೂರಿನ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಹೇಳಿದರು.
ಪಟ್ಟಣದ ಸಂಗಮೇಶ್ವರ ಸಭಾ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ ಹಾಗೂ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ 75 ನೇ ವರ್ಷದ ಸ್ವಾತಂತ್ರ-್ಯ ಅಮೃತ ಮಹೋತ್ಸವದ ಅಂಗವಾಗಿ ಎನ್.ಎಸ್.ಎಸ್. ಶಿಬಿರಾರ್ಥಿಗಳಿಗೆ 5 ದಿನಗಳ ಕಾರ್ಯಾಗಾರ ಹಾಗೂ ಶ್ರಮದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಚಾರ್ಯ, ಸಾಹಿತಿ,ಬಿ.ಆರ್.ಪೋಲಿಸ್ಪಾಟೀಲ ಮಾತನಾಡಿ,
ರಾಷ್ಟ್ರೀಯ ಸೇವಾ ಯೋಜನೆ ನಮ್ಮನ್ನು ಸ್ವಚ್ಛತೆ ಹಾಗೂ ಸುಭದ್ರತೆಯತ್ತ ಕೊಂಡೊಯ್ಯತ್ತದೆ. ದೇಶವನ್ನು ಕಟ್ಟಲಿಕ್ಕೆ ಹೆಚ್ಚು ಜನಕ್ಕಿಂತ ಕೆಚ್ಚೆದೆಯವರು ಬೇಕು. ಅನ್ಯಾಯವನ್ನು ಕಂಡು ಎದ್ದು ಹೋಗುವವರ ಬದಲು ಎದ್ದು ನಿಲ್ಲುವವರು ಬೇಕು. 5 ದಿನಗಳ ಕಾರ್ಯಾಗಾರದಲ್ಲಿ ದೇಶ ಕಟ್ಟುವ ತರಬೇತಿ ನೀಡುತ್ತಿದ್ದು ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ತಹಶೀಲ್ದಾರ ಶ್ರೀಧರ ಗೋಟೂರ ಮಾತನಾಡಿ, ಗಾಂಧೀಜಿಯವರ ರಾಮರಾಜ್ಯದ ಕನಸನ್ನು ನನಸಾಗಿಸುವ ಶಕ್ತಿ ಇರುವುದು ಯುವಶಕ್ತಿಯಲ್ಲಿ ಮಾತ್ರ ಎಂದರು. ಸಾನ್ನಿಧ್ಯವನ್ನು ವಹಿಸಿದ್ದ ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು, ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ಎಸ್. ವಿದ್ಯಾಸಂಸ್ಥೆ ಅಧ್ಯಕ್ಷ ಎಚ್. ಎಸ್. ಪಾಟೀಲ ಮಾತನಾಡಿದರು. ಬ.ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮಂಗಲಾ ಕೋಳೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಗಾಂಧಿಭವನದ ಸಂಯೋಜಕ ಡಾ.ವಿ.ಪ್ರಶಾಂತ, ಪ್ರಾಂಶುಪಾಲೆ ಮಲ್ಲಮ್ಮ ಬಿರಾದಾರ ಇದ್ದರು. ಎಸ್.ಸಿ.ಗುಡಗುಂಟಿ ನಿರೂಪಿಸಿದರು. ಪ್ರಕಾಶ ಪಾಟೀಲ ಸ್ವಾಗತಿಸಿದರು. ಬಿ.ಐ.ಹಿರೇಹೊಳಿ ವಂದಿಸಿದರು. ಶಿಬಿರದ ಹಾಗೂ ಗಾಂಧಿ ಅಧ್ಯಯನ ಕೇಂದ್ರದ ಉದ್ಘಾಟನೆ ಧ್ವಜಾರೋಹಣದೊಂದಿಗೆ ಜರುಗಿತು. ಶೀಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯ, ಊಟದ ಕಟ್ಟೆ ಕಟ್ಟುವ ಶ್ರಮದಾನದಲ್ಲಿ ಪಾಲ್ಗೊಂಡರು.