ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತೇಜೋವಧೆ: ಕ್ರಮಕ್ಕೆ ತಾಳಿಕೋಟೆ ಕಾನಿಪ ಆಗ್ರಹ
ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತೇಜೋವಧೆ: ಕ್ರಮಕ್ಕೆ ತಾಳಿಕೋಟೆ ಕಾನಿಪ ಆಗ್ರಹ
ತಾಳಿಕೋಟೆ 12: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ತೇಜೋವಧೆಗೆ ಯತ್ನಿಸುತ್ತಿರುವ ಆರೋಪ ಎದುರಿಸುತ್ತಿರುವ ಬಂಗ್ಲೆ ಮಲ್ಲಿಕಾರ್ಜುನ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ತಾಳಿಕೋಟೆ ತಾಲೂಕು ಘಟಕ ಆಗ್ರಹಿಸಿದೆ.
ಈ ಕುರಿತು ತಾಲೂಕು ತಹಶೀಲ್ದಾರ್ ಮೂಲಕ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಖಂಡನಾ ಮನವಿ ಸಲ್ಲಿಸಲಾಯಿತು. ಡಿ.ವಿ.ಜಿ. ಅವರ ಆಶಯದಂತೆ 95 ವರ್ಷಗಳಿಂದ ಮುನ್ನಡೆಯುತ್ತಿರುವ ಕೆಯುಡಬ್ಲ್ಯೂಜೆ, 10 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, ಕಾರ್ಮಿಕ ಕಾಯ್ದೆಯಡಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು. ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಅವರು ಕ್ಷೇಮಾಭಿವೃದ್ಧಿ ನಿಧಿಗೆ 1.1 ಕೋಟಿ ಠೇವಣಿ ಇರಿಸಿ, ಕೋವಿಡ್ನಿಂದ ಮೃತಪಟ್ಟ ನೂರಾರು ಪತ್ರಕರ್ತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಅವರ ರಂಗಭೂಮಿ ಸಾಧನೆಗೆ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿರುವುದನ್ನು ಸಹಿಸದ ಕೆಲವರು ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಂಗ್ಲೆ ಮಲ್ಲಿಕಾರ್ಜುನ ಅವರು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಳ್ಳಾರಿಯ ಬ್ರೂಸ್ಪೇಟೆ ಹಾಗೂ ಸಿರಗುಪ್ಪ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಪದಾಧಿಕಾರಿಗಳು ತಿಳಿಸಿದರು. ಪತ್ರಕರ್ತರ ಹೆಸರಿನಲ್ಲಿ ಬ್ಲ್ಯಕ್ಮೇಲ್ ತಂತ್ರ ನಡೆಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅವರ ದೂರುಗಳಿಗೆ ಕಿಮ್ಮತ್ತು ನೀಡದೆ, ಸಂಘ ಹಾಗೂ ರಾಜ್ಯಾಧ್ಯಕ್ಷರ ಗೌರವಕ್ಕೆ ಧಕ್ಕೆ ತರುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಮುನ್ನಾ ಶಿರಸಗಿ, ಸಂಜಯಸಿಂಗ್ ರಜಪೂತ, ಎಸ್.ಎಂ. ಸಜ್ಜನ, ರವೀಂದ್ರ ಕಟ್ಟಿಮನಿ, ಶ್ರೀಶೈಲ್ ಬಿರಾದಾರ, ಯಲಗುರ್ಪ ವಡವಡಗಿ, ವಿಜಯ ರಾಜಾಪೂರಿ, ಸಂತೋಷ ಶಹಪುರ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.