ಗೋಕಾಕ್

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಪುಣ್ಯ ಪ್ರಾಪ್ತಿ: ಲವಕುಮಾರ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಪುಣ್ಯ ಪ್ರಾಪ್ತಿ: ಲವಕುಮಾರ

ಘಟಪ್ರಭಾ 25: ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್‌.ಆರ್‌.ಲವಕುಮಾರ ಹೇಳಿದರು. 

ಅವರು ಸಮೀಪದ ಶಿಂದಿಕುರಬೇಟ ಗ್ರಾಮದ ವಿಠ್ಠಲ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ಗೋಕಾಕ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಶಿಂದಿಕುರಬೇಟ ವಲಯ ಆಶ್ರಯದಲ್ಲಿ ಸಾಮೂಹಿಕ ಶ್ರೀಸತ್ಯ ನಾರಾಯಣ ಪೂಜಾ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. 

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಸಮಾಜಮುಖಿ ಕಾರ್ಯವನ್ನು ಮಾಡುತ್ತಾ ಮಹಿಳೆಯು ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸತ್ಯ ನಾರಾಯಣ ಪೂಜೆ ಮಾಡುವ ಮೂಲಕ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಬಹುದು. ಜಾತಿ, ಬೇಧ, ಭಾವ ಮರೆತು ನಾವೆಲ್ಲರೂ ಒಂದೇ ಎಂಬ ಮನೋಭಾವವನ್ನು ಹೊಂದಿ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು. 

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ನಾಗಲಿಂಗ ಪೋತದಾರ ಮಾತನಾಡಿ ಡಾ: ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಾಡುತ್ತಿರುವ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಅದ್ಭುತವಾಗಿವೆ. ಈ ನಿಟ್ಟಿನಲ್ಲಿ ಹೆಗ್ಗಡೆಯವರ ಸಾಮಾಜಿಕ ಕಳಕಳಿ ಜನತೆಗೆ ಅತ್ಯಂತ ಪ್ರೇರಣೆಯಾಗಿದೆ ಎಂದರು.  

ಕಾರ್ಯಕ್ರಮದ ಸಾನಿಧ್ಯವನ್ನು ಬಸವೇಶ್ವರ ದೇವಋಷಿ ಬಸಪ್ಪ ಕಬ್ಬೂರ ವಹಿಸಿದ್ದರು. ವೇದಿಕೆ ಮೇಲೆ ಜ್ಯೋತ್ತೆಪ್ಪ ಬಂತಿ, ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮಾಯನ್ನವರ, ಉಪಾಧ್ಯಕ್ಷೆ ಸುಜಾತಾ ಲಗಳೇರ, ರಾಮಯ್ಯ ಆಲೋಶಿ, ಗ್ರಾ.ಪಂ ಸದಸ್ಯ ಅಡಿವೆಪ್ಪ ಬೆಕ್ಕಿನವರ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ ಕಂಬಾರ, ಕೆಎಂಎಫ್ ಅಧ್ಯಕ್ಷ ಶೇಖರ ಮಾನೆ, ಯೋಜನಾಧಿಕಾರಿ ಮಮತಾ ನಾಯ್ಕ, ಮೇಲ್ವಿಚಾರಕಿ ಕವಿತಾ ಎಸ್‌.ಟಿ ಸೇರಿದಂತೆ ಅನೇಕರು ಇದ್ದರು. 

ಸಾಮೂಹಿಕ ಸತ್ಯ ನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಜನ ದಂಪತಿಗಳು ಪಾಲ್ಗೊಂಡಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ