ಪಂಚಾಕ್ಷರ ಸ್ವಾಮೀಜಿ ಷಷ್ಠ್ಯಬ್ದಿ: ತುಲಾಭಾರ
ಲೋಕದರ್ಶನ ವರದಿ
ಯರಗಟ್ಟಿ 17: ಸಮೀಪದ ಯಕ್ಕುಂಡಿ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ಷಷ್ಠ್ಯಬ್ದಿ ಅಂಗವಾಗಿ ಶ್ರೀಗಳ ತುಲಾಭಾರ ಕಾರ್ಯಕ್ರಮ ಜರುಗಿತು.
ಬೆಳಗಾವಿ ಕಾಡಾ ಅಧ್ಯಕ್ಷ ವಿ.ಆಯ್.ಪಾಟೀಲ ಮಾತನಾಡಿ ಭಾರತ ದೇಶದ ಸಂಸ್ಕೃತಿಯಲ್ಲಿ ಪೂಜ್ಯರಿಗೆ, ಗುರುಗಳಿಗೆ ಪೂಜ್ಯ ಭಾವನೆ ತೋರಿಸಿ ಗೌರವಿಸಿ ಗುರುವಂದನೆ ಸಲ್ಲಿಸುವುದಾಗಿದೆ. ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವನ್ನು ನೀಡಿ ಮುಕ್ತರನ್ನಾಗಿ ಮಾಡಲು ಗುರುಗಳಿಂದ ಮಾತ್ರ ಸಾಧ್ಯ. ಜೀವನದ ಜಂಜಾಟಗಳನ್ನು ನೀಗಿಸಿ, ಮನಸ್ಸಿಗೆ ಶಾಂತಿ ನೆಮ್ಮದಿಯ ಜೊತೆಗೆ ಮಹತ್ವದ್ದಾದುದನ್ನು ಸಾಧಿಸಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ. ಗುರುವಿನ ಸೇವೆ ಮಾಡುತ್ತ, ಅವರ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನ ಪಾವನವಾಗುತ್ತದೆ ಎಂದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ ಬಸವಾದಿ ಶಿವಶರಣರು ನಮ್ಮ ಬಾಳು ಬೆಳಗಲು ವಚನಗಳ ಮೂಲಕ ಅನೇಕ ಸಂದೇಶ ನೀಡಿದ್ದಾರೆ ಅವುಗಳನ್ನು ಪಾಲಿಸೋಣ ಎಂದರು.
ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸವದತ್ತಿ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ, ನಾಗನಗೌಡ್ರು ಭರಮಗೌಡರ, ಮಹಾಂತೇಶ ಕರ್ಜಗಿಮಠ, ಎಫ್.ವೈ.ಭೈರಣ್ಣವರ, ಸಂಜೀವಕುಮಾರ ತುಳಜಣ್ಣವರ, ಪ್ರವಚನಕಾರರಾದ ರಘುನಂದ ಶಾಸ್ತ್ರೀ, ಬಸವರಾಜ ಹೊಂಗಲ, ಶಂಕರಗೌಡ ಪಾಟೀಲ, ಅಬ್ದಲುಖಾದರ್ ಜೈಲಾನಿ ಬಾರಿಗಿಡದ ಸೇರಿದಂತೆ ಇತರರು ಇದ್ದರು