ಸೆಪ್ಟಿಕ್ ಟ್ಯಾಂಕ್ ದುರಸ್ಥಿ, ಸ್ವಚ್ಛತೆಗೆ ಪೌರ ಕಾರ್ಮಿಕರ ಬಳಕೆ ನಿಷೇಧ
ಕಾರವಾರ : ಜಿಲ್ಲೆಯಲ್ಲಿ ಬರುವ ನಗರ ಪ್ರದೇಶದಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆÀ ಸೇರಿದಂತೆ ಇತರೆ ಕೆಲಸಗಳಿಗೆ ಪೌರ ಕಾರ್ಮಿಕರನ್ನು ಹಾಗೂ ಮಾನವ ಸಂಪನ್ಮೂಲ ಸೇವೆಯನ್ನು ಬಳಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಸರ್ಕಾರದ ಕಾಯ್ದೆ ಮ್ಯಾನುವಲ್ ಸ್ಕ್ಯಾವೆಂಜರ್ಸ್ಗಳ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ-2013 ಉಲ್ಲಂಘನೆಯಾದಲ್ಲಿ ಎಂ.ಎಸ್. ಕಾಯ್ದೆ 2013ರ ಸೆಕ್ಷನ್ 7,8 & 9 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 304(ಎ) ರಡಿಯಲ್ಲಿ ಶಿಕ್ಷಾರ್ಹ ಅಪರಾಧ 5 ವರ್ಷಗಳ ಜೈಲು ಮತ್ತು 5 ಲಕ್ಷ ರೂ ದಂಡ ವಿಧಿಸಲಾಗುವುದು. ಸೆಪ್ಟಿಕ್ ಟ್ಯಾಂಕ್ ದುರಸ್ಥಿ, ಸ್ವಚ್ಛತಾ ಕಾರ್ಯಗಳಿಗೆ ನಗರ ಸ್ಥಳೀಯ ಸಂಸ್ಥೆಯ ಯಾಂತ್ರಿಕ (ಸಕ್ಕಿಂಗ್ & ಜೆಟ್ಟಿಂಗ್ ಯಂತ್ರ) ಗಳನ್ನು ಮಾತ್ರ ಬಳಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಯಂತ್ರಗಳ ಲಭ್ಯತೆಯಿದೆ. ಹೀಗಾಗಿ ಮೊತ್ತವನ್ನು ಪಾವತಿಸಿಕೊಂಡು ವಾಹನದ ಸೌಲಭ್ಯ ಪಡೆಯಬಹುದು. ಅಲ್ಲದೇ ಜಿಲ್ಲೆಯ ಪ್ರದೇಶದ ಅಥವಾ ಯಾವುದೇ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೇ ಜನಾಂಗದವರನ್ನು ಈ ಕೆಲಸಕ್ಕೆ ಬಳಸಿಕೊಳ್ಳುವುದು ಅಪರಾಧವಾಗಿದೆ. ಒಂದುವೇಳೆ ಬಳಸಿಕೊಂಡಲ್ಲಿ ಈ ಮೇಲಿನ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.