ಕರ್ನಾಟಕ ದಂಪತಿಗಳ ಸಮಾಜಮುಖಿ ಕೆಲಸ ಹೊಗಳಿದ ಪ್ರಧಾನಿ
ನವದೆಹಲಿ, ಡಿ 27: ಮನ್ ಕೀ ಬಾತ್' ನಲ್ಲಿ ಕರ್ನಾಟಕವನ್ನು ಮತ್ತೊಮ್ಮೆ ಸ್ಮರಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಸೋಮೇಶ್ವರ ಬೀಚ್ ನಲ್ಲಿದ್ದ 800 ಕೆ.ಜಿ ಗೂ ಹೆಚ್ಚು ಕಸ ತೆಗೆದು ಸ್ವಚ್ಛಗೊಳಿಸಿದ ಅನುದೀಪ್ ದಂಪತಿಗಳ ಸಮಾಜಮುಖಿ ಕೆಲಸವನ್ನು ಮನಸಾರೆ ಹೊಗಳಿದ್ದಾರೆ. 2020ರ ಸಾಲಿನ ಕೊನೆಯ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಚ್ಛ ಭಾರತ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಒಂದೇ ಒಂದು ಚೂರು ಕಸ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ದೇಶದಲ್ಲಿರುವ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅದರಲ್ಲೂ ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಗಮನಾರ್ಹ ಬೆಳವಣಿಗೆಗಳಾಗಿದೆ ಎಂದರು. ಈ ನಡುವೆ ಕರ್ನಾಟಕದಿಂದ ಬಂದ ಪತ್ರವೊಂದನ್ನು ಓದಿದ ಮೋದಿ, ಶ್ರೀರಂಗಪಟ್ಟಣ ಸಮೀಪದ ಮಂದಿರವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛಗೊಳಿಸಿದ ಕಾರ್ಯವನ್ನು ಅಭಿನಂದಿಸುವ ಮೂಲಕ ಯುವ ಸಮೂಹದ ಇಂತಹ ಕಾರ್ಯಗಳು ದೇಶದ ಜನರಿಗೆ ಮಾದರಿಯಾಗಲಿದೆ ಎಂದರು.ದೇಶದಲ್ಲಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಕುರಿತಾಗಿ ಜನರು ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಬಹುಪಾಲು ವಿದೇಶಿ ವಸ್ತುಗಳ ಬಳಕೆಯನ್ನು ನಿಲ್ಲಿಸುವ ಮೂಲಕ ಸ್ವದೇಶಿಯವಾಗಿ ತಯಾರಿಕೆ ವಸ್ತುಗಳನ್ನೇ ಜನರು ಖರೀಸುತ್ತಿರುವುದು ಪ್ರಗತಿಯ ಸಂಕೇತ ಎಂದೂ ಪ್ರಧಾನಿ ಮನ್ ಕೀ ಬಾತ್ ಭಾಷಣದಲ್ಲಿ ಹೇಳಿದರು.