ದ್ವಿಭಾಷಾ ಸೂತ್ರ ಅನುಷ್ಠಾನ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದ ವಿರೋಧ
ಬೆಂಗಳೂರು 02 : ಮಾನ್ಯ ಕರ್ನಾಟಕ ಸರ್ಕಾರವು ದ್ವಿಭಾಷಾ ನೀತಿ ಜಾರಿಗೊಳಿಸಲು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತೀವ್ರವಾಗಿ ವಿರೋಧಿಸುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಕನ್ನಡ, ಇಂಗ್ಲಿಷ್, ಹಿಂದಿ ತ್ರಿಭಾಷ ಪದ್ದತಿಯು ಕರ್ನಾಟಕ, ಭಾರತ ಮತ್ತು ಜಗತ್ತನ್ನು ಒಂದುಗೂಡಿಸುವ ಭಾವನಾತ್ಮಕ ವಿಚಾರವಾಗಿದೆ ಎಂಬುವುದನ್ನು ಗಮನಿಸಬಹುದು. ತ್ರಿಭಾಷಾ ಸೂತ್ರ ಎಂಬುವುದು ಯಾವುದೋ ಭಾಷೆಯ ಹೇರಿಕೆಗಾಗಿಯೊ ಅಥವಾ ಯಾವುದೋ ಹೋರಾಟದ ಫಲವಾಗಿ ಬಂದದ್ದಲ್ಲ , ಶಿಕ್ಷಣ ತಜ್ಞರ ಮತ್ತು ಶೈಕ್ಷಣಿಕ ಪರಿಣತರ ಅನೇಕ ವರ್ಷಗಳ ಯೋಚನೆಯಿಂದಾಗಿ ಮಕ್ಕಳ ಪ್ರತಿಭೆಯನ್ನು ಅನಾವರಣ ಗೊಳಿಸುವುದಕ್ಕಾಗಿ ಬಂದಂತಹ ನೀತಿಯಾಗಿದೆ.
ಭಾರತದಲ್ಲಿ ತ್ರಿಭಾಷಾ ಸೂತ್ರವು 1968 ರಲ್ಲಿ ಜಾರಿಗೆ ಬಂದಿದೆ. ಅಂದಿನಿಂದ ಸ್ಥಳೀಯ ಭಾಷೆ,ಆಂಗ್ಲ ಭಾಷೆ ಮತ್ತು ಹಿಂದಿ ಭಾಷೆಯನ್ನು ಕಲಿಸುವ ಅಭಿಪ್ರಾಯವನ್ನು ಕೋಠಾರಿ ಕಮಿಷನ್ ಶಿಫಾರಸಿನಂತೆ ಬಹು ಭಾಷಾ ಸೌಹಾರ್ದತೆಯ ಮೇರೆಗೆ ಮಾಡಲಾಗಿತ್ತು. ಆದರೆ ಜವಾಬ್ದಾರಿಯುತ ಮಾನ್ಯ ಸರ್ಕಾರವು ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದ್ವಿಭಾಷಾ ನೀತಿ ಎಂಬ ಗೊಂದಲವನ್ನು ಸೃಷ್ಟಿಸಿ, ಕನಿಷ್ಠತಮ ಸಾಮಾನ್ಯ ಜ್ಞಾನವು ಇಲ್ಲದ ರೀತಿಯಲ್ಲಿ ವರ್ತಿಸಿ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ರನ್ನು ಏಕೆ ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದೆ ಎಂಬುವುದೇ ಪ್ರಶ್ನೆ? ಈ ರೀತಿ ದ್ವಿಭಾಷಾ ಸೂತ್ರವನ್ನು ತರಲೇಬೇಕೆಂಬ ಯೋಚನೆ ಸರಕಾರದ ಬಳಿ ಇದ್ದದ್ದೆ ಆದಲ್ಲಿ ಈ ಮೋದಲೆ ಘೋಷಣೆ ಮಾಡಿ ಸಾರ್ವಜನಿಕವಾಗಿ ಚರ್ಚೆ ಆಗಲು ಮಾಡಿಕೊಡಬೇಕಾಗಿತ್ತು.
ಅದನ್ನು ಬಿಟ್ಟು ಯಾರದೋ ಒತ್ತಡಕೇ ಮಣಿದು ದ್ವಿಭಾಷಾ ನೀತಿಯ ಮುಖಾಂತರ ದೇಶೀಯ ಭಾಷೆಗಳನ್ನು ನಾಶಮಾಡಲು ಹೊರಟಿರುವ ರಾಜ್ಯ ಸರಕಾರದ ಯೋಜನೆಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ತೀವ್ರವಾಗಿ ವಿರೋಧಿಸುತ್ತದೆ. ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಕೈಗೊಂಡಿರುವ ಬದಲಾವಣೆಗಳು ಅತ್ಯಂತ ದುರದೃಷ್ಟಕರ ಮತ್ತು ವಿದ್ಯಾರ್ಥಿ ವಿರೋಧಿಯಾಗಿವೆ. ದಶಕಗಳಿಂದಲೂ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದ್ದ ತ್ರಿಭಾಷಾ ಸೂತ್ರಕ್ಕೆ ಕೊಡಲಿ ಪೆಟ್ಟು ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರ್ಪನವರ ಅಪ್ರಬುದ್ಧ ನಿರ್ಧಾರವು ರಾಜ್ಯದ ಶೈಕ್ಷಣಿಕ ಘನತೆಗೆ ದೊಡ್ಡ ಧಕ್ಕೆ ತಂದಿದೆ.
ತೃತೀಯ ಭಾಷೆಯ ಅಂಕಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಕೇವಲ ಗ್ರೇಡ್ ಪದ್ಧತಿಗೆ ಸೀಮಿತಗೊಳಿಸಿರುವುದು ಮತ್ತು ಒಟ್ಟು ಅಂಕಗಳನ್ನು 625 ರಿಂದ 525 ಕ್ಕೆ ಇಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದೆ. ದೇಶಿಯ ಭಾಷೆಗಳ ನಾಶ ಮಾಡುವ ದ್ವಿಭಾಷಾ ನೀತಿಯು ನಮ್ಮ ಮಾತೃಭಾಷೆಯಾದ ಕನ್ನಡಕ್ಕೂ ಸಹ ಹೊಡೆತ ಕೊಡುವುದನ್ನು ಸರ್ಕಾರವು ಯೋಚಿಸಬೇಕಿದೆ. ಹಾಗಾಗಿ ಮಾನ್ಯ ಸರ್ಕಾರವು ಈ ದ್ವಿಭಾಷಾ ನೀತಿಯನ್ನು ಜಾರಿ ಮಾಡಬಾರದು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಆಗ್ರಹಿಸುತ್ತದೆ.