ಇಂಡಿ

ಆನ್‌ಲೈನ್ ತರಬೇತಿ ಕಾರ್ಯಕ್ರಮ

ಆನ್‌ಲೈನ್ ತರಬೇತಿ ಕಾರ್ಯಕ್ರಮ

ಇಂಡಿ 22:ಮಳೆಗಾಲದಲ್ಲಿ ನಿಂಬೆ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲಾಗಿ ಮಾರುಕಟ್ಟೆಗೆ ಬರುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ನಿಂಬೆ ಹಣ್ಣಿನ ದರ ಕಡಿಮೆಯಾಗುತ್ತಿದೆ. ರೈತರು ಇಂತಹ ಸಂರ್ಧಭದಲ್ಲಿ ನಷ್ಟವನ್ನು ಸರಿದೂಗಿಸಲು ಮೌಲ್ಯವರ್ಧನೆ ಕುರಿತು ಜ್ಞಾನವನ್ನು ಪಡೆದುಕೊಂಡು ಈ ತರಬೇತಿಗೆ ಸದುಪಯೋಗ ಪಡೆದುಕೊಳ್ಳಿ ಎಂದು ವಿಜಯಪುರದ ಸಹ ವಿಸ್ತರಣಾ ನಿರ್ದೇಶಕ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ. ಆರ್‌. ಬಿ. ಬೆಳ್ಳಿ ಹೇಳಿದರು. 

ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿರುವ ಐ.ಸಿ.ಎ.ಆರ್‌. ಕೃಷಿ ವಿಜ್ಞಾನ ಕೇಂದ್ರ, ಇಂಡಿ ವತಿಯಿಂದ ಮಂಗಳವಾರರಂದು “ಕಡಿಮೆ ವೆಚ್ಚದಲ್ಲಿ ನಿಂಬೆ ಹಣ್ಣಿನ ಪೌಡರ್ ತಯಾರಿಕೆ ಮತ್ತು ಮಾರುಕಟ್ಟೆ ಅವಕಾಶಗಳು” ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ದಿ ಮಂಡಳಿ ಇಂಡಿ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.  

ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ ಲಿಂಬೆ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗದೆ ಇರುವುದು ಸರ್ವೆಸಾಮಾನ್ಯವಾಗಿದೆ. ಹಾಗಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ನಿಂಬೆಯ ಪೌಡರ ಅಥವಾ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.  

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕೈಲಾಸ ಕಾಂಬಳೆ, ಸಹ ಪ್ರಾಧ್ಯಾಪಕರು, ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ಯಾಂತ್ರೀಕರಣ ವಿಭಾಗ, ಎಂ.ಪಿ.ಕೆ.ವಿ. ರಾಹುರಿ (ಮಹಾರಾಷ್ಟ್ರ) ಇವರು ಮಾತನಾಡಿ ನಿಂಬೆ ಹಣ್ಣುಗಳನ್ನು ವರ್ಗಿಕರಣ ಮತ್ತು ಸ್ವಚ್ಛ ಮಾಡಿ ಮಾರುಕಟ್ಟೆ ತಂದಾಗ ದರ ಹೆಚ್ಚಿಗೆ ಸಿಗುತ್ತದೆ. ರೈತರು ನಿಂಬೆ ಹಣ್ಣಿನಿಂದ ವಿವಿಧ ರೀತಿಯ ಉತ್ಪನ್ನಗಳಾದ ಜ್ಯೂಸ್, ಉಪ್ಪಿನಕಾಯಿ ಇತ್ಯಾದಿಗಳನ್ನು ಮಾಡಿ ಇವುಗಳನ್ನು ತಮ್ಮ ಸ್ಥಳೀಯ ಹೆಸರನ್ನು ಇಟ್ಟು ಬ್ರಾಂಡ್ ಮಾಡಿ ಮಾರುಕಟ್ಟೆ ಮಾಡಲು ತಿಳಿಸಿದರು. ನಿಂಬೆ ಹಣ್ಣಿನ ಸಣ್ಣ ಸಣ್ಣ ತುಂಡುಗಳನ್ನು ಮಾಡಿ ಅತಿ ಕಡಿಮೆ ವೆಚ್ಚದಲ್ಲಿ ಸೋಲಾರ ಟನ್‌ಲ್ ಡ್ರೈಯರ್ ಅಥವಾ ಪಾಲಿಹೌಸ ಉಪಯೋಗಿಸಿ ಮಾರುಕಟ್ಟೆ ದರ ಕಡಿಮೆ ಇದ್ದಾಗ ಸಿ ನಿಂಬೆಯ ಪೌಡರ ತಯಾರಿಸಿ ಈ ರೀತಿ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು ಎಂದು ತಿಳಿಸಿದರು. 

ಪ್ರತಿ ಕೆ.ಜಿ. ಗೆ ನಿಂಬೆ ಹಣ್ಣಿಗೆ ಸಾಮಾನ್ಯವಾಗಿ ರೂ. 20 ರಿಂದ ರೂ. 40 ಕ್ಕೆ ಮಾರಾಟವಾಗುತ್ತದೆ. ಆದರೆ ಇದೆ ನಿಂಬೆ ಹಣ್ಣಿನ ಪೌಡರ್ ತಯಾರಿಸಿದಲ್ಲಿ ರೂ. 400-500 ಪ್ರತಿ ಕಿ. ಗ್ರಾಂ. ದೊರೆಯತ್ತದೆ ಎಂದು ವಿವರಿಸಿದರು. 

ಇತ್ತೀಚಿಗೆ ಲಿಂಬೆ ಹಣ್ಣನ್ನು ಕಟ್ ಮಾಡದೇ ಸಂಪೂರ್ಣ ನಿಂಬೆ ಹಣ್ಣನ್ನು ಒಣಗಿಸಿದರೆ ಅದಕ್ಕೆ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ ಮತ್ತು ಸಣ್ಣ ತುಂಡುಗಳನ್ನು ಮಾಡಿ ಒಣಗಿಸಿ ಅದನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು ಎಂದು ತಿಳಿಸಿದರು.  

ಇದೇ ಸಂಧರ್ಭದಲ್ಲಿ ನಿಂಬೆಯ ಪೌಡರ ಮತ್ತು  ಅದರ ಉತ್ಪನ್ನಗಳ ಖರೀದಿಗಾರರು  ಸಹ ಭಾಗವಹಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.  

ಡಾ. ರವಿ ವೈ. ವಿಜ್ಞಾನಿ (ಗೃಹ ವಿಜ್ಞಾನ) ಕೃಷಿ ವಿಜ್ಞಾನ ಕೇಂದ್ರ, ಇಂಡಿ ಇವರು ನಿಂಬೆಯ ಮೌಲ್ಯವರ್ದಿತ ಉತ್ಪನ್ನಗಳ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಮತ್ತು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ಇಂಡಿಗೆ ಭೇಟಿ ಮಾಡಿ ಇವರನ್ನು ಸಂಪರ್ಕಿಸಲು ಕೋರಿದರು. 

ಕಾರ್ಯಕ್ರಮದಲ್ಲಿ 93 ಕ್ಕಿಂತ ಹೆಚ್ಚಿನ ಜನ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.      

ಲಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ,  ಡಾ. ಆರ್‌. ಬಿ. ನೆಗಳೂರ ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥರು, ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು. 

ಸುದ್ದಿ ಓದಿ