ಅಧಿಕಾರಿಗಳು ಒತ್ತಡಕ್ಕೆ ಮಣಿದು ಕಾನೂನು ಬಾಹಿರ ತೀರ್ಮಾನ ಮಾಡಬಾರದು : ಬೊಮ್ಮಾಯಿ
ಶಿಗ್ಗಾವಿ 15 : ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ, ಅನುದಾನ ಬರುವ ನೀರೀಕ್ಷೆಯೂ ಇಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಕೆಲಸಗಳನ್ನು ಮಾಡಬೇಕು ಅಧಿಕಾರಿಗಳು ಒತ್ತಡಕ್ಕೆ ಮಣಿದು ಯಾವುದೇ ಕಾನೂನು ಬಾಹಿರ ತೀರ್ಮಾನಗಳನ್ನು ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಕಚೇರಿಗಳ ಸಂಕೀರ್ಣ ಕಟ್ಟಡದ ಸಭಾಭವನದಲ್ಲಿ ಏರಿ್ಡಸಲಾಗಿದ ಶಿಗ್ಗಾವಿ-ಸವಣೂರ ವಿಧಾನಸಭಾ ಮತಕ್ಷೇತ್ರದ ಶಿಗ್ಗಾವಿ-ಸವಣೂರು ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಾನು ದೆಹಲಿಯಲ್ಲಿಯೇ ಇರಲಿ, ಹಾವೇರಿಯಲ್ಲಿರಲಿ ಎಲ್ಲಿಯೇ ಇದ್ದರೂ ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿಯ ಮೇಲೆ ಒಂದು ಕಣ್ಣು ಮತ್ತು ಕಳಕಳಿ ಇದ್ದೇ ಇರುತ್ತದೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ, ನಾನೇ ಹೇಳಲಿ ಇನ್ನಾರೋ ಒತ್ತಡ ಹೇರಿದರೂ ಕಾನೂನು ಮೀರಿ ಕೆಲಸ ಮಾಡಬೇಡಿ, ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳಿಗೆ ಯಾವಾಗಲೂ ರಕ್ಷಣೆ ಕೊಡುವ ಕೆಲಸ ನಾನು ಮಾಡುತ್ತೇನೆ ಎಂದರು.
ಶಿಗ್ಗಾವಿ ಸವಣೂರು ಮಾದರಿ ಕ್ಷೇತ್ರ ಮಾಡುವುದು ನಮ್ಮ ಕನಸು, ಕಳೆದ ಹದಿನೈದು ವರ್ಷದ ಹಿಂದೆ ಈ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಇರಲಿಲ್ಲ. ಕುಡಿಯಲು ನೀರು ಸಿಗುತ್ತಿರಲಿಲ್ಲ. ಹದಿನೈದು ವರ್ಷದಲ್ಲಿ ಕ್ಷೇತ್ರದ ಚಿತ್ರಣ ಬದಲಾಗಿದೆ, ಬಡವರು, ಮಹಿಳೆಯರು, ಅಸಹಾಯಕರು, ಸರ್ಕಾರದ ಯೋಜನೆಯ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರೊಂದಿಗೆ ಮಾನವೀಯತೆಯಿಂದ ನಡೆದುಕೊಳ್ಳಿ, ಅವರಿಗೆ ಸಾಧ್ಯವಾದಷ್ಟು ಕಾನೂನಿನ ಮಿತಿಯಲ್ಲಿ ಸಹಾಯ ಮಾಡುವ ಕೆಲಸ ಮಾಡಿ, ಎಲ್ಲರಿಗೂ ಕಾನೂನು ಗೊತ್ತಿದೆ. ಆದರೆ, ಒಂದು ಕೆಲಸವನ್ನು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟು ತಿರಸ್ಕಾರ ಮಾಡುವುದು, ಮತ್ತೊಂದು ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡುವುದು. ನಮ್ಮ ಕ್ಷೇತ್ರದಲ್ಲಿ ಮಾನವೀಯ ನೆಲೆಯಲ್ಲಿ ಕಾನೂನು ವ್ಯಾಪ್ತಿಗೆ ತಂದು ಕೆಲಸ ಮಾಡಿಕೊಡುವ ವ್ಯವಸ್ಥೆ ಇದೆ ಎಂದು ಹೇಳಿದರು.
ಹದಿನೈದು ವರ್ಷಗಳ ಹಿಂದೆ ಕೆಲಸ ಮಾಡಲು ಸರ್ಕಾರಿ ಕಚೇರಿಗಳು ಇರಲಿಲ್ಲ. ಈಗ ಸುಸಜ್ಜಿತ ಕಚೇರಿಗಳಾಗಿವೆ. ನೀವು ಈಗ ಸುಗಮವಾಗಿ ಆಡಳಿತ ನಡೆಸುವ ಸ್ಥಿತಿಯಲ್ಲಿದ್ದೀರಿ. ಇದನ್ನು ಗಮನದಲ್ಲಿಟ್ಟುಕೊಂಡ ಕೆಲಸ ಮಾಡಬೇಕು. ಶಿಗ್ಗಾವಿ ಹಿಂದುಳಿದ ತಾಲೂಕಿನಿಂದ ಪ್ರಗತಿದಾಯಕ ತಾಲೂಕು ಆಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿದ ತಾಲೂಕು ಮಾಡಲು ನಿಮ್ಮ ಸಹಕಾರ ಅಗತ್ಯ ಎಂದರು.
ಅಭಿವೃದ್ದಿಗೆ ಹಿನ್ನಡೆಯಾಗಬಾರದು
ಕಳೆದ ಏಳೆಂಟು ತಿಂಗಳಿಂದ ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ನಮ್ಮ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಯೋಜನೆಗಳಿಗೆ ಹಣ ಬಿಡಿಗಡೆಯಾಗಿದ್ದು, ಅಂತಹ ಯೋಜನೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿ, ನಿಮ್ಮ ಇಲಾಖೆಗಳಲ್ಲಿ ಎಷ್ಟು ಯೋಜನೆ ಗುರಿ ಹಾಕಿಕೊಳ್ಳಲಾಗಿತ್ತು, ಎಷ್ಟು ಪ್ರಗತಿ ಸಾಧಿಸಲಾಗಿದೆ. ಎಷ್ಟು ಸಾಧಿಸಬೇಕಿದೆ ಎನ್ನುವುದನ್ನು ಪರಾಮರ್ಷಿಸಿಕೊಳ್ಳಿ, ಸಂಪೂರ್ಣ ಗುರಿ ತಲುಪಲು ನಿಮ್ಮ ಕಾರ್ಯವೈಖರಿ ಹೇಗೆ ಬದಲಾಯಿಕೊಳ್ಳುತ್ತೀರಿ ಎನ್ನುವುದನ್ನು ನಿರ್ಧರಿಸಿ, ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ರಾಜ್ಯ ಸರ್ಕಾರ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಈ ಬಗ್ಗೆ ಪರೀಶೀಲಿಸಿ ಎಲ್ಲರಿಗೂ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿಗಳು ಎಷ್ಟು ಜನರಿಗೆ ತಲುಪಿವೆ. ಎಷ್ಟು ಕಾರ್ಯ ನಿರ್ವಹಿಸುತ್ತಿವೆ ಎನ್ನುವುದನ್ನು ಪರೀಶೀಲಿಸುವಂತೆ ಸೂಚಿಸಿದರು.
ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ
ಸಭೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೇ ರಾಜಕಾರಣಿಗಳ ಸೂಚನೆಯಂತೆ ನಡೆದುಕೊಳ್ಳುತ್ತಿರುವ ಆರೋಪ ಇದ್ದು, ಜನ ಸಾಮಾನ್ಯರಿಗೆ ಅನ್ಯಾಯವಾದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಯಾವುದೇ ರಾಜಕಾರಣಿಗಳ ಹಿಂಬಾಲಕರಾಗದೇ ಕಾನೂನು ಪ್ರಕಾರ ಕೆಲಸ ಮಾಡುವಂತೆ ಖಡಕ್ ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಎಸಿ ಮೊಹ್ಮದ ಖೀಜರ್, ತಹಶೀಲ್ದಾರ ಸಂತೋಷ ಹಿರೇಮಠ, ಭರತ ಹಾಗೂ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಲಯ್ಯನಕೋಟೆ ವಿಶ್ವನಾಥ ಹಾಗೂ ನವೀನ ಪ್ರಸಾದ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.