ಮದುವೆ ಮಂಟಪಕ್ಕೆ ಧಾವಿಸಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಯರಗಟ್ಟಿ 02: ಬಾಲಕಿಯ ವಿವಾಹ ತಯಾರಿ ನಡೆದು, ಇನ್ನೇನು ವಿವಾಹ ಆಗಬೇಕು ಅನ್ನುವಷ್ಟರಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಗಮಿಸಿ ಬಾಲ್ಯವಿವಾಹ ಒಂದನ್ನು ನಿಲ್ಲಿಸಿರುವ ಘಟನೆ ಯರಗಟ್ಟಿ ಸಮೀಪದ ಗೊರಗುದ್ದಿ ಗ್ರಾಮದಲ್ಲಿ ನಡೆದಿದೆ.
ಬಾಲ್ಯವಿವಾಹ ನಡೆಸಲು ಎಲ್ಲಾ ಸಿದ್ದತೆಗಳನ್ನು ನಡೆಸಲಾಗಿತ್ತು. ಕಡಬಿ ಗ್ರಾಮದ 15 ವರ್ಷದ ಬಾಲಕಿಯನ್ನು ಗೊರಗುದ್ದಿ ಗ್ರಾಮದ 25 ವರ್ಷದ ವರನೊಂದಿಗೆ ಮದುವೆ ಮಾಡಲು ಎರಡೂ ಕಡೆಯ ಸಂಬಂಧಿಕರು ಒಪ್ಪಿದ್ದರು. ಮದುವೆ ಸಮಾರಂಭಕ್ಕಾಗಿ 500ಕ್ಕೂ ಹೆಚ್ಚು ಜನರು ಈ ಸಭಾಂಗಣದಲ್ಲಿ ಜಮಾಯಿಸಿದ್ದರು.
ಈ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ದೊರೆತ ಕೂಡಲೇ ಸವದತ್ತಿ ತಾಲೂಕು ಮಕ್ಕಳ ಸಂರಕ್ಷಣಾ ಘಟಕದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಅಧಿಕಾರಿಗಳು, ಯರಗಟ್ಟಿ ಪೊಲೀಸ್ ಸಿಬ್ಬಂದಿ ಮತ್ತು ಕಡಬಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮದುವೆ ಮಂಟಪಕ್ಕೆ ಧಾವಿಸಿ ವಿವಾಹವನ್ನು ನಿಲ್ಲಿಸಿದ್ದಾರೆ. ಎರಡೂ ಕುಟುಂಬದವರಿಗೆ ಬಾಲ್ಯ ವಿವಾಹದ ಪರಿಣಾಮದ ಬಗೆಗೆ ಜಾಗೃತಿ ಮೂಡಿಸಿದ ಅಧಿಕಾರಿಗಳು ಕಾನೂನು ನಿಬಂಧನೆಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು ಮತ್ತು ಕುಟುಂಬ ಸದಸ್ಯರು, ಮತ್ತು ಪುರೋಹಿತರಿಂದ ಬಾಂಡ್ಗಳನ್ನು ಬರೆಸಿಕೊಳ್ಳಲಾಯಿತು. ಸಭಾಂಗಣದಲ್ಲಿ ನೆರೆದಿದ್ದ ಜನರನ್ನು ಮನೆಗೆ ವಾಪಸ್ ಕಳುಹಿಸಲಾಯಿತು. ಈ ವೇಳೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸುನಿತಾ ಪಾಟೀಲ, ಎಸಿಡಿಪಿಒ ರೇಣುಕಾ ಕರಮುಡಿ, ಮೇಲ್ವಿಚಾರಕಿ ಲಕ್ಷ್ಮೀ ಪಾಟೀಲ, ಪಿಡಿಓ ಈರ್ಪ ಹವಳಪ್ಪನವರ, ಗ್ರಾ. ಪಂ. ಅಧ್ಯಕ್ಷ ಪ್ರಕಾಶ ಸೂಣದೋಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.