ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಘಟಪ್ರಭಾಕ್ಕೆ ಭೇಟಿ
ಮಲ್ಲಾಪೂರ ಪಿ.ಜಿ, ಧುಪದಾಳ ಜಲ ಶುದ್ಧಿಕರಣ ಘಟಕಗಳ ಪರೀಶೀಲನೆ
ಘಟಪ್ರಭಾ 25: ಘಟಪ್ರಭಾ ಪಟ್ಟಣದ ಜನರಿಗೆ ಪುರಸಭೆಯಿಂದ ಕಲುಷಿತ ನೀರು ಸರಬರಾಜು ಆಗುತ್ತಿರುವ ಕುರಿತು ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತಕೊಂಡ ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ (ಆಗಆಅ) ಅಧಿಕಾರಿಗಳು ಘಟಪ್ರಭಾ ಪಟ್ಟಣಕ್ಕೆ ಶುಕ್ರವಾರ ಭೇಟಿ ನೀಡಿ ಮಲ್ಲಾಪೂರ ಪಿ.ಜಿ ಹಾಗೂ ಧುಪದಾಳ ಜಲ ಶುದ್ಧಿಕರಣ ಘಟಕಗಳನ್ನು ಪರೀಶೀಲನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಕಾರ್ಯನಿರ್ವಾಹಕ ಅಭಿಯಂತರಾದ ವ್ಹಿ.ಎಸ್.ತಡಸಲೂರ, ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ವ್ಹಿ.ಎಂ. ಸಾಲಿಮಠ ಅವರು ಸ್ಥಳೀಯ ಪುರಸಭೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೂಡಲೇ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು. ನಿಷ್ಕ್ರಿಯ ಗೊಂಡಿರುವ ಹಳೆಯ ಜಲ ಶುದ್ಧಿಕರಣ ಘಟಕಗಳನ್ನು ದುರಸ್ತಿಗೊಳಿಸಬೇಕು ಇಲ್ಲವಾದಲ್ಲಿ ಬೇರೆ ಮಾರ್ಗದಲ್ಲಿಯಾದರೂ ಜನರಿಗೆ 2 ದಿನಕ್ಕೂಮ್ಮೆ ಕುಡಿಯಲು ಶುದ್ಧ ನೀರು ಪೂರೈಸಲು ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.
ಧುಪದಾಳ ಹಾಗೂ ಮಲ್ಲಾಪೂರ ಪಿ.ಜಿಯ ಹಳೆಯ ಜಲ ಶುದ್ಧಿಕರಣ ಘಟಕಗಳ ಸಾಮರ್ಥ್ಯ ಕಡಿಮೆಯಿದೆ ಘಟಪ್ರಭಾ ಪುರಸಭೆಯ ಜನಸಂಖ್ಯೆಗೆ ಅನುಗುಣವಾಗಿ ಸಮರ್ಕವಾಗುವ ರೀತಿಯಲ್ಲಿ ಶಾಶ್ವತ ಯೋಜನೆ ರೂಪಿಸಿ ಜನರಿಗೆ 2 ದಿನಕ್ಕೂಮ್ಮೆ ಕುಡಿಯಲು ಶುದ್ಧ ನೀರು ಪೂರೈಸಲು ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಾಕಿಕೊಳ್ಳಲಾಗಿದೆ ಎಂದು ಘಟಪ್ರಭಾ ಪುರಸಭೆಯ ಅಭಿಯಂತರರಾದ ಎಂ.ಎಸ್.ತೇಲಿ ತಿಳಿಸಿದ್ದಾರೆ.