ಅಧಿಕಾರಿಗಳ ದಾಳಿ, ಪ್ಲಾಸ್ಟಿಕ್ ಕವರ್ಗಳ ವಶಕ್ಕೆ
ತಾಳಿಕೋಟೆ 22: ರಾಜ್ಯ ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ಕವರ್ಗಳನ್ನು ನಿಷೇಧ ಹೇರಿದ್ದರೂ ಸಹಿತ ಅಕ್ರಮವಾಗಿ ಪ್ಲಾಸ್ಟಿಕ್ ಕವರ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಪುರಸಭೆ ಅಧಿಕಾರಿಗಳು ಸುಮಾರು 1.25 ಕ್ವಿಂಟಾಲ್ ಪ್ಲಾಸ್ಟಿಕ್ ಬ್ಯಾಗ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸರಕಾರದ ಅಧಿಸೂಚನೆಯನ್ವಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ಪ್ಲಾಸಿಕ್ ತಟ್ಟೆ, ಲೋಟ, ಚಮಚಗಳು, ಕ್ಲಿಂಗ್ ಫಿಲ್ಮ್ ಮತ್ತು ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೋಲ್, ಪ್ಲಾಸ್ಟಿಕ್ ಮೈಕ್ರೊ ಬೀಡ್ಸ್ನಿಂದ ತಯಾರಿಸಿದ ವಸ್ತುಗಳು ಮಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧಿಸಲ್ಪಟ್ಟಿದೆ. ಪ್ಲಾಸ್ಟಿಕ್ ಕವರ್ಗಳ ನಿಷೇಧ ಕುರಿತು ಹಲವು ಬಾರಿ ಜಾಗೃತಿಯನ್ನು ಸಹ ಮೂಡಿಸಲಾಗಿದೆ. ಜಾಗೃತಿ ಮೂಡಿಸಿದರೂ ಸಹಿತ ಅಕ್ರಮವಾಗಿ ಪ್ಲಾಸ್ಟಿಕ್ ಕವರ್ ಮಾರಾಟ ಮತ್ತು ಸಂಗ್ರಹಣೆ ಮಾಡಿರುವ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಸಂದರ್ಭದಲ್ಲಿ ಸಿಗುವ ಪ್ಲಾಸ್ಟಿಕ್ ವಸ್ತುಗಳನ್ನು ಮುಟ್ಟುಗೋಲನ್ನು ಹಾಕಿಕೊಳ್ಳಲಾಗಿದೆ. ದಾಳಿ ಕುರಿತು ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಪುರಸಭೆ ಕೆಲವು ಕಟ್ಟು ನಿಟ್ಟಿನ ನಿರ್ಣಯಗಳನ್ನು ತೆಗೆದುಕೊಂಡಿದೆ. ಮೊದಲ ಹಂತವಾಗಿ ತಿಳುವಳಿಕೆಯನ್ನು ನೀಡಲಾಗಿದೆ. ನಂತರ ದಾಳಿ ಮಾಡಿ ಕೇವಲ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ನಂತರ ದುಪ್ಪಟ್ಟು ದಂಡ ವಸೂಲಿ, ಅಂತಿಮವಾಗಿ ಕ್ರಿಮಿನಲ್ ಕೇಸ್ ದಾಖಲಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪ್ಲಾಸ್ಟಿಕ್ ವಸ್ತುಗಳ ಸರಬರಾಜು, ಮಾರಾಟ ಹಾಗೂ ಬಳಕೆ ಮಾಡಿ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎಸ್.ಎ.ಗತ್ತರಗಿ, ಗುರ್ಪ ಬಸರಿಕಟ್ಟಿ, ಕಮಲೇಶ ಬಂಗಿ, ಹಣಮಂತ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.