ಅಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ
ಬನವಾಸಿ 20: ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಅಧಿಕಾರಿಗಳ ನಡೆ ಹಳ್ಳಿಯ ಕಡೆ, ಹಳ್ಳಿ ಭೇಟಿ ಹಾಗೂ ವಾಸ್ತವ್ಯ ಕಾರ್ಯಕ್ರಮವನ್ನು ಶನಿವಾರ ಸ್ಥಳೀಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ಎಂ.ಆರ್ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಕಂದಾಯ ಇಲಾಖೆಯ ಕಾರ್ಯಕ್ರಮ ಇದಾಗಿದ್ದು, ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸಾಧ್ಯವಿದ್ದರೆ ಸ್ಥಳದಲ್ಲಿಯೇ ಪರಿಹಾರ ನೀಡಿ, ಇಲ್ಲದಿದ್ದರೆ ಸಮಯ ಮಿತಿಯೊಳಗೆ ಪರಿಹಾರ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಬನವಾಸಿ ವ್ಯಾಪ್ತಿಯಲ್ಲಿನ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿ ಪರಿಶೀಲನೆ, ಮತಗಟ್ಟೆ ಪರಿಶೀಲನೆ, ಅರಣ್ಯ ಇಲಾಖೆಯಿಂದ ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕ ಕುಂದುಕೊರತೆ ಪರಿಶೀಲನೆ, ಪೌತಿ ಆಂದೋಲನ, ಮಾಶಾಸನ, ಪಹಣಿ ತಿದ್ದುಪಡಿ, ಆರ್.ಟಿ.ಸಿ ಹಾಗೂ ಕಂದಾಯ ಇಲಾಖೆಯ ವಿಷಯಗಳ ಅಹವಾಲು ಸ್ವೀಕೃತಿ, ತೋಟಗಾರಿಕೆ, ಅಬಕಾರಿ, ಪೋಲಿಸ್, ಹೆಸ್ಕಂ, ಕೃಷಿ, ರೇಷ್ಮೆ, ಜಲಾನಯನ ಇಲಾಖೆಯವರಿಂದ ಅವರ ಇಲಾಖೆಗಳಿಗೆ ಸಂಬಂಧಿಸಿದ ವಿಷಯ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಬನವಾಸಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಚುನಾವಣೆಯಲ್ಲಿ ಮತದಾನದ ಅವಶ್ಯಕತೆಯ ಬಗ್ಗೆ ತಿಳುವಳಿಕೆ ಹಾಗೂ ಕುಂದುಕೊರತೆಯ ಬಗ್ಗೆ ಸಂವಾದ ನಡೆಸಲಾಯಿತು. ಸರ್ವೇ ಹಾಗೂ ಇತರೇ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಾರ್ವಜನಿಕ ಅರ್ಜಿಯ ಬಗ್ಗೆ ವಿವರವಾದ ಚರ್ಚೆ ನಡೆಯಿತು.
ಜನಪ್ರತಿನಿಧಿಗಳು ವಾರ್ಡಿನ ಸ್ವಚ್ಛತೆ, ಚರಂಡಿ, ಬೀದಿ ದೀಪ ಹಾಗೂ ಇತರೆ ಗ್ರಾಮದ ಅಭಿವೃದ್ದಿ ಕುರಿತು ಚರ್ಚೆ ನಡೆಯಿತು. ವೈದ್ಯಕೀಯ ಸಿಬ್ಬಂದಿಯವರಿಂದ ಸಾರ್ವಜನಿಕರ ವೈದ್ಯಕೀಯ ತಪಾಸಣೆ ಮಾಡುವ ಕಾರ್ಯಕ್ರಮ ಹಾಗೂ ಹರಿಜನ ಕೇರಿ ಭೇಟಿ, ಅವರ ಕುಂದುಕೊರತೆ ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಜಿ.ಪಂ ಸದಸ್ಯರು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷ, ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.
ಕಾರ್ಯಕ್ರಮವನ್ನು ಕಂದಾಯ ನಿರೀಕ್ಷಕಿ ಮಂಜುಳ ನಾಯ್ಕ್ ನಿರೂಪಿಸಿ, ಸ್ವಾಗತಿಸಿದರು. ಉಪ ತಹಶೀಲ್ದಾರ್ ಡಿ.ಆರ್. ಬೆಳ್ಳಿಮನಿ ವಂದಿಸಿದರು.