ಗಮನ ಸೆಳೆದ ರಂಗಗೀತೆ, ಬುರ್ರಕಥಾ ವಚನ ಗಾಯನ
ಹಂಪಿ 03:ಹಂಪಿ ಉತ್ಸವ 2018-19ರ ಅಂಗವಾಗಿ ರತ್ನಕೂಟ ಮಹಿದ್ವಾರ ವೇದಿಕೆಯಲ್ಲಿ ಶನಿವಾರ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಂಗಗೀತೆ, ಬುರ್ರಕಥಾ ಮತ್ತು ವಚನ ಗಾಯನ ಎಲ್ಲರ ಗಮನ ಸೆಳೆಯಿತು.
ರಂಗ ಕಲಾವಿದೆ ಆರೋಪಿ ವೀಣಾ ಅಕ್ಕಮಹಾದೇವಿಅಕ್ಕಮಹಾದೇವಿ ನಾಟಕದ "ಬೆಟ್ಟದ ಮೇಲೊಂದು ಮನೆಯ ಮಾಡಿ", ರಾಯರ ಕುರುಕ್ಷೇತ್ರ ನಾಟಕದ "ಬಾ ಸುಭ ಪ್ರತಿಮಾ", ಹೇಮರೆಡ್ಡಿ ಮಲ್ಲಮ್ಮ ನಾಟಕದ "ಹೃದಯ ವ್ಯಥೆ" ರಂಗಗೀತೆಗಳನ್ನು ಸುಮಧುರವಾಗಿ ಹಾಡಿದರು.ನಂತರ ರಕ್ತರಾತ್ರಿ ನಾಟಕದ "ಪ್ರಿಯಾ ಪ್ರಿಯಾ" ಹಾಡನ್ನು ಹಾಡಿದರು. ಇವರಿಗೆ ಬಳ್ಳಾರಿಯ ಪೊಲಕ್ಸ್ ಹನುಮಂತಪ್ಪ ಹಾಮರ್ೊನಿಯಂ ಮತ್ತು ಮೋರಿಗೆ ವಿರೂಪಾಕ್ಷ ತಬಲಾ ಸಾಥ್ ನೀಡಿದರು.
ಕಲಬುರಗಿಯ ಗುರುಶಾಂತಯ್ಯ ಸ್ಥಾವರಮಠ ಪ್ರಾರಂಭದಲ್ಲಿ ಬಸವಣ್ಣನವರ "ಚಕೋರಂಗೆ ಚಂದ್ರಮನ" ವಚನವನ್ನು ಯಮನ ರಾಗದಲ್ಲಿ ಸುಶ್ರಾವ್ಯವಾಗಿ ಹಾಡಿದರು.ನಂತರ "ಎನ್ನಂತರಂಗವೇ ಬಸವಣ್ಣನಯ್ಯ ವಚನವನ್ನು ಭೂಪಶ್ರೀ ರಾಗದಲ್ಲಿ, "ತನ್ನ ನೋಯಿಸಿ" ವಚನವನ್ನು ಪಟದೀಪ ರಾಗದಲ್ಲಿ ಮತ್ತು "ಬೆಲ್ಲದ ನೀರೆರೆದರೇ" ವಚನವನ್ನು ಭೀಮಪಲಾಸಿ ರಾಗದಲ್ಲಿ ಹಾಗೂ "ಎನಗಿಂತ ಕಿರಿಯರಿಲ್ಲ ವಚನವನ್ನು ಭೈರವ ರಾಗದಲ್ಲಿ ಸಾದರಪಡಿಸಿ ಎಲ್ಲರೂ ಹೃನ್ಮನ ಗೆದ್ದರು. ಇವರಿಗೆ ಪವಿತ್ರಾ ಸ್ಥಾವರಮಠ ಹಾಮರ್ೊನಿಯಂ ಮತ್ತು ಅಂಧ ಕಲಾವಿದ ಲೋಕನಾಥ ಕುಂಬಾರ ತಬಲಾ ಸಾಥ್ ನೀಡಿದರು. ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಬುರ್ರಕಥಾ ಕಲಾ ತಂಡ ಪ್ರಸ್ತುತ ಪಡಿಸಿದ ಬುರ್ರಕಥಾ ಸಹ ಕೇಳುಗರ ಕಿವಿಗೆ ಇಂಪು ನೀಡಿತು.