ಎರಡು ವರ್ಷಗಳ ಬಳಿಕ ಹಿಮಾಚಲದಿಂದ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆತಂದ ಗದಗ ಜಿಲ್ಲಾಡಳಿತ
ಗದಗ ಅ.3: ಸುಮಾರು ಎರಡು ವರ್ಷಗಳಿಂದ ಕುಟುಂಬಸ್ಥರಿಂದ ದೂರವಾಗಿದ್ದ ಶಿರಹಟ್ಟಿ ತಾಲ್ಲೂಕಿನ ಕಲ್ಲಾಗನೂರು ಗ್ರಾಮದ 55 ವರ್ಷದ ರಾಮಣ್ಣ ತಂದೆ ಅಜ್ಜಪ್ಪ ಗಂಗಣ್ಣವರ ಅವರನ್ನು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಿಂದ ಸುರಕ್ಷಿತವಾಗಿ ಗದಗ ಜಿಲ್ಲೆಗೆ ಕರೆತಂದು ಕುಟುಂಬಸ್ಥರೊಂದಿಗೆ ಸೇರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ರಾಮಣ್ಣ ಅವರು ಮೂಲತಃ ಹಾವೇರಿ ಜಿಲ್ಲೆಯ ಇಚ್ಛಂಗಿ ಗ್ರಾಮದವರಾಗಿದ್ದು, ಶಿರಹಟ್ಟಿ ತಾಲ್ಲೂಕಿನ ಕಲ್ಲಾಗನೂರಿನಲ್ಲಿ ವಾಸವಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರು ಕಾಣೆಯಾಗಿದ್ದರು. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸೆ.16ರಂದು ಪೊಲೀಸ್ ಉಪನೀರೀಕ್ಷಕರು ಸ್ಥಳೀಯವಾಗಿ ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ರಾಮಣ್ಣ ಅವರು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಇರುವ ಮಾಹಿತಿ ಲಭ್ಯವಾಯಿತು. ಬಳಿಕ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಿರಾಶ್ರಿತರ ಪರಿಹಾರ ಕೇಂದ್ರ, ಧಾರವಾಡದ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಲಾಯಿತು.
ಬೆಂಗಳೂರು ಸಹಾಯಕ ಕಾರ್ಯದರ್ಶಿ ಚಂದ್ರ್ಪ ಬಿ. ಗೋಕಾರ್ ಅವರ ನೇತೃತ್ವದ ತಂಡವು ಸೆ.30ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಿ ಚಂಡೀಗಢ ತಲುಪಿತು. ಅಲ್ಲಿನ ಉಪವಿಭಾಗಾಧಿಕಾರಿ ಶ್ರೀಮತಿ ಸಮರ್ಥಕ ನಾಗ್ ಅವರ ಸಹಕಾರದೊಂದಿಗೆ ರಾಮಣ್ಣ ಅವರನ್ನು ವಶಕ್ಕೆ ಪಡೆದು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಯಿತು.
ಅ.3ರಂದು ರಾಮಣ್ಣ ಅವರನ್ನು ಗದಗ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು. ಅಗತ್ಯ ಆರೋಗ್ಯ ತಪಾಸಣೆ ಬಳಿಕ ಕುಟುಂಬಸ್ಥರಾದ ರೇಣುಕಾ ಕೋಂ ರಾಮಣ್ಣ ಗಂಗಣ್ಣವರ, ಪರಶುರಾಮ ಪೂಜಾರ, ಹೊಳೆಎಟಗಿ ಹಾಗೂ ಬಸವರಡ್ಡಿ ವೆಂಕಟರಡ್ಡಿ ರಡ್ಡೇರ, ಸಾಸಲವಾಡಿ ಅವರೊಂದಿಗೆ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ಸುಮಾರು ಎರಡು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ರಾಮಣ್ಣ ಅವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮರಳಿ ಕುಟುಂಬದೊಂದಿಗೆ ಸೇರಿಸುವಲ್ಲಿ ಗದಗ ಜಿಲ್ಲಾಡಳಿತ, ಪೊಲೀಸ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಹಿಸಿದ ಸಮನ್ವಯದ ಪಾತ್ರ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.