ವಿಜಯಪುರ ನಗರ ಕ್ಷೇತ್ರದಲ್ಲಿ ನಕಲಿ ಮರಣ ಪ್ರಮಾಣಪತ್ರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ
ಲೋಕದರ್ಶನ ವರದಿ
ವಿಜಯಪುರ 03: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೀವಂತ ಮತದಾರರನ್ನು ಮೃತರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ನಕಲಿ ಮರಣ ಪ್ರಮಾಣಪತ್ರಗಳನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಮತದಾರರ ನೋಂದಣಾಧಿಕಾರಿ, ಜಿಲ್ಲಾಧಿಕಾರಿ, ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೂ ಮನವಿಯ ಪ್ರತಿಗಳನ್ನು ನೀಡಲಾಯಿತು. ಮನವಿಯ ಪ್ರಕಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಲೆಟರ್ಹೆಡ್ನಲ್ಲಿ ಕೆಲ ಮತದಾರರು ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಅದರ ಆಧಾರದ ಮೇಲೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಲಾಗಿದೆ.
ಏಳು ಜೀವಂತ ಮತದಾರರ ಹೆಸರು ಪತ್ತೆ ಎಂಟು ಮತದಾರರು ಮೃತಪಟ್ಟಿದ್ದಾರೆಂದು ತೋರಿಸಿ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಆದರೆ ಕಾಂಗ್ರೆಸ್ನ ಬಿಎಲ್‌ಎ-2 ಪ್ರತಿನಿಧಿಗಳು ಸ್ಥಳೀಯವಾಗಿ ಪರೀಶೀಲಿಸಿದಾಗ, ಅವರಲ್ಲಿ ಏಳು ಮಂದಿ ಜೀವಂತವಾಗಿರುವುದು ಪತ್ತೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸಂಬಂಧಿತ ಮರಣ ಪ್ರಮಾಣಪತ್ರಗಳು ನೈಜವೇ, ಅವುಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ನೀಡಲಾಗಿದೆ ಹಾಗೂ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ನಿಯಮ ಪಾಲನೆಯಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರೀಶೀಲಿಸುವಂತೆ ಆಗ್ರಹಿಸಲಾಗಿದೆ. 1,046 ಮತದಾರರ ಹೆಸರು ಅಳಿಸುವ ಆರೋಪ ವಿಜಯಪುರ ನಗರ ಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸುಮಾರು 1,046 ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಮೃತರೆಂದು ತೋರಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸಂಬಂಧಿತ ದಾಖಲೆಗಳನ್ನು ಚುನಾವಣಾಧಿಕಾರಿಗಳು ಬಿಎಲ್‌ಒಗಳಿಗೆ ಪರೀಶೀಲನೆಗಾಗಿ ಕಳುಹಿಸಿದ್ದು, ಸ್ಥಳೀಯ ಪರೀಶೀಲನೆಯಲ್ಲಿ ಹಲವು ಮತದಾರರು ಜೀವಂತವಾಗಿರುವುದು ಪತ್ತೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಫಾರ್ಮ-7 ಮೂಲಕ ಮತದಾರರ ಹೆಸರು ಅಳಿಸುವ ಸಂದರ್ಭದಲ್ಲಿ ಸೂಕ್ತ ದಾಖಲೆ ಹಾಗೂ ಪುರಾವೆಗಳನ್ನು ಸಲ್ಲಿಸುವ ಜವಾಬ್ದಾರಿ ಅರ್ಜಿದಾರರದ್ದಾಗಿದ್ದು, ತಪ್ಪು ಘೋಷಣೆ ನೀಡುವುದು ಕಾನೂನುಬದ್ಧವಾಗಿ ಶಿಕ್ಷಾರ್ಹವಾಗಬಹುದು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ನಕಲಿ ದಾಖಲೆ ಅಥವಾ ಸುಳ್ಳು ಮಾಹಿತಿ ಬಳಕೆಯಾಗಿರುವುದು ದೃಢಪಟ್ಟರೆ ಸಂಬಂಧಪಟ್ಟವರ ವಿರುದ್ಧ ಚುನಾವಣಾ ಕಾನೂನು ಸೇರಿದಂತೆ ಅನ್ವಯಿಸುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬೇಕು ಹಾಗೂ ಅರ್ಹ ಹಾಗೂ ಜೀವಂತ ಮತದಾರರ ಹೆಸರುಗಳನ್ನು ತಪ್ಪಾಗಿ ಅಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು, ವಕೀಲರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.