ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಿನ ಓಷಧಿಗೆ ಚೀಟಿ ಆರೋಪ
ಲೋಕದರ್ಶನ ವರದಿ
ಕಾಗವಾಡ 03: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡಬೇಕಾದ ಓಷಧಿಗಳನ್ನು ನೀಡದೆ, ಹೊರಗಿನಿಂದ ಓಷಧಿ ಖರೀದಿಸುವಂತೆ ಚೀಟಿ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು. ತಾಲೂಕು ಆಡಳಿತದ ವತಿಯಿಂದ ಶೇಡಬಾಳ ಪಟ್ಟಣದ ಬಸವೇಶ್ವರ ಸಭಾಭವನದಲ್ಲಿ ಶನಿವಾರ ದಿ. 03 ರಂದು ಆಯೋಜಿಸಿದ್ದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಅದಕ್ಕೆ ಅಧಿಕಾರಿಗಳು ಕೆಲ ಸಮಸ್ಯೆಗಳ ಇತ್ಯರ್ಥಕ್ಕೆ ಸ್ಥಳದಲ್ಲಿಯೇ ಸ್ಪಂದಿಸಿದರೇ ಉಳಿದ ಸಮಸ್ಯೆಗಳಿಗೆ ಶೀರ್ಘ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ, ನಿಮ್ಮ ಮನೆ ಬಾಗಿಲಿಗೆ ನಮ್ಮ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸಿ, ಶೀಘ್ರ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮತ್ತು ಪ್ರತಿಯೊಬ್ಬರೂ ಸಹ ಇಲ್ಲಿ ತೆರೆದಿರುವ ಆನ್‌ಲೈನ್ ಮುಖಾಂತರವೇ ಅರ್ಜಿ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಮಂಡಿಸಬೇಕೆಂದು ತಿಳಿಸಿದರು. ಮುಖಂಡ ಶ್ರೀನಿವಾಸ ಕಾಂಬಳೆ ಮಾತನಾಡಿ, ಕಾಗವಾಡದ ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಕಾರ ಪೂರೈಸುವ ಓಷಧಿಗಳನ್ನು ನೀಡುವ ಬದಲು ಹೊರಗಿನಿಂದ ಓಷಧಿ ತರುವಂತೆ ಚೀಟಿ ಬರೆಯಲಾಗುತ್ತಿದೆ. ಹೊರಗಿನಿಂದಲೇ ಓಷಧಿ ಖರೀದಿಸುವುದಾದರೆ ಸರ್ಕಾರಿ ಆಸ್ಪತ್ರೆ ಏಕೆ ಬೇಕು ಎಂದು ಪ್ರಶ್ನಿಸಿದರು. ಹಾವು ಕಡಿತದಂತಹ ತುರ್ತು ಸಂದರ್ಭಗಳಲ್ಲಿಯೂ ಓಷಧಿ ಲಭ್ಯವಿಲ್ಲ ಎಂದು ಹೇಳಲಾಗುತ್ತಿದ್ದು, ಬಡವರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.
ಈ ವೇಳೆ ಶೇಡಬಾಳ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ, ಇಒ ವೀರಣ್ಣ ವಾಲಿ, ಗ್ರೆಡ್-2 ತಹಶೀಲ್ದಾರ ರಶ್ಮಿ ಜಕಾತಿ, ಉಪ ತಹಶೀಲ್ದಾರ ಅಣ್ಣಾಸಾಬ ಕೋರೆ, ಸಿಡಿಪಿಒ ಸಂಜಯಕುಮಾರ ಸದಲಗೆ, ಪಿಎಸ್‌ಐ ರಾಘವೇಂದ್ರ ಖೋತ, ಬಿಸಿಎಂ ಅಧಿಕಾರಿ ವೆಂಕಟೇಶ ಕುಲಕರ್ಣಿ, ಅರಣ್ಯ ಇಲಾಖೆಯ ರಾಕೇಶ ಅರ್ಜುನವಾಡ, ಕುಡಿಯುವ ನೀರು ಸರಬರಾಜು ಇಲಾಖೆಯ ರವೀಂದ್ರ ಮುರಗಾಲಿ, ಹೆಸ್ಕಾಂ ಎಇಇ ಎ.ಎಸ್. ಮಾಕಣಿ, ಡಿ.ಎಸ್. ಅರಳೀಕಟ್ಟಿ, ಕೃಷಿ ಅಧಿಕಾರಿ ನಿಂಗನಗೌಡ ಬಿರಾದರ, ತೋಟಗಾರಿಗೆ ಇಲಾಖೆಯ ರೇಖಾ ಹಳ್ಳೂರ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.