ಕಾಗವಾಡ

ಶೇಡಬಾಳ ರೈತರಿಗೆ ಬೆಳೆ ವಿಮೆ ವಂಚನೆ

ಶೇಡಬಾಳ ರೈತರಿಗೆ ಬೆಳೆ ವಿಮೆ ವಂಚನೆ


ಕಾಗವಾಡ 01: ತಾಲೂಕಿನ ಶೇಡಬಾಳ ಪಟ್ಟಣದ ಸಿಎಸ್ಸಿ ಆನಲೈನ್ ಸೆಂಟರ್ ಮೂಲಕ ರೈತರಿಗೆ ಬೆಳೆ ವಿಮೆ ಪ್ರೀಮಿಯಂ ಹಾಗೂ ಬೆಳೆ ಹಾನಿ ಪರಿಹಾರದಲ್ಲಿ ವಂಚನೆ ನಡೆದಿರುವ ಆರೋಪ ಕೇಳಿಬಂದಿದೆ. ಈ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮ ಕೈಗೊಂಡು ಹಣ ಮರಳಿಸುವಂತೆ ರೈತರು ಪೊಲೀಸರು ಹಾಗೂ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದಾರೆ.  

ಸಿಎಸ್ಸಿ ಆನಲೈನ್ ಸೆಂಟರ್ ಮಾಲೀಕ ಅಲ್ಲಯ್ಯ ಹಿರೇಮಠ ಅವರು ಶೇಡಬಾಳ ಹಾಗೂ ಸುತ್ತಮುತ್ತಲಿನ ಸುಮಾರು 60ರಿಂದ 70 ರೈತರಿಂದ ದ್ರಾಕ್ಷಿ ಬೆಳೆ ವಿಮೆ ಪ್ರೀಮಿಯಂ ಹಣ ಪಡೆದಿದ್ದಾರೆ. ಆದರೆ ಪ್ರೀಮಿಯಂ ಪಾವತಿಸದೆ ರೈತರಿಗೆ ವಂಚಿಸಿದ್ದಾರೆ ಎಂಬ ಆರೋಪವಿದೆ.

ಇದರಿಂದ ಬೆಳೆ ಹಾನಿಗೆ ದೊರೆಯಬೇಕಿದ್ದ ಪರಿಹಾರವೂ ರೈತರಿಗೆ ಸಿಗದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ. ರೈತರಾದ ಬಂಡು ಕಟ್ಟಿಕರ, ಪ್ರಕಾಶ ಚೌಗುಲೆ ಹಾಗೂ ಪ್ರವೀಣ ಪಾಟೀಲ ಮಾತನಾಡಿ, ಕಳೆದ ನಾಲ್ಕಾರು ವರ್ಷಗಳಿಂದ ಅಲ್ಲಯ್ಯ ಹಿರೇಮಠ ಅವರ ಆನಲೈನ್ ಸೆಂಟರ್ನಲ್ಲಿ ಬೆಳೆ ವಿಮೆ ಪ್ರೀಮಿಯಂ ಪಾವತಿಸುತ್ತಿದ್ದೇವೆ.

ಈ ವರ್ಷವೂ ವಿಶ್ವಾಸದಿಂದ ಹಣ ನೀಡಿದ್ದರೂ ಪ್ರೀಮಿಯಂ ಪಾವತಿಯಾಗಿಲ್ಲ. ಇದರಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ತೊಂದರೆಯಾಗಿದೆ. ಆರೋಪಿಯನ್ನು ಬಂಧಿಸಿ, ನಮ್ಮ ಹಣ ಹಾಗೂ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.  

ಈ ವೇಳೆ ಹನುಮಂತ ಚೋಳಕೆ, ಬಾಳಾಸಾಬ ಚೌಗುಲೆ, ಗಣೇಶ ವಟಾರೆ, ಶಿವರಾಯ ಕಟ್ಟಿಕರ, ಅರುಣ ಕಟ್ಟಿಕರ, ಸುಶಾಂತ ವಟಾರೆ, ಅಮನ ಗಾವಡೆ, ದೇವೇಂದ್ರ ಚೌಗುಲೆ, ಮಾರುತಿ ಕಟ್ಟಿಕರ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. ಅಲ್ಲಯ್ಯ ಹಿರೇಮಠ ಹಾಗೂ ಸಂತೋಷ ಹಿರೇಮಠ ವಿರುದ್ಧ ಕಾಗವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 


ಸುದ್ದಿ ಓದಿ