ಅಥಣಿ

ಕನ್ನಡಕ್ಕೆ ಅಳಿವಿಲ್ಲ, ಕಲಾವಿದರು ಜಾತಗತೀಕರಣಕ್ಕೆ ತೆರೆದುಕೊಳ್ಳಲಿ : ಸರ್ವಾಧ್ಯಕ್ಷೆ ರೋಹಿಣಿ ಯಾದವಾಡ ಅಭಿಮತ: ಸಂಭ್ರಮದ ಗಡಿನಾಡು ಉತ್ಸವ

ಕನ್ನಡಕ್ಕೆ ಅಳಿವಿಲ್ಲ, ಕಲಾವಿದರು ಜಾತಗತೀಕರಣಕ್ಕೆ ತೆರೆದುಕೊಳ್ಳಲಿ : ಸರ್ವಾಧ್ಯಕ್ಷೆ ರೋಹಿಣಿ ಯಾದವಾಡ ಅಭಿಮತ: ಸಂಭ್ರಮದ ಗಡಿನಾಡು ಉತ್ಸವ

ಲೋಕದರ್ಶನ ವರದಿ 


ಅಥಣಿ: ಕನ್ನಡ ಭಾಷೆಗೆ ಎರಡೂವರೆ ಸಾವಿರ ವರುಷಗಳ ಭವ್ಯ ಇತಿಹಾಸವಿದೆ. ಸಾಂಸ್ಕೃತಿಕ ಹಿನ್ನಲೆ ಇದೆ. ವಿವಿಧತೆಯಲ್ಲಿ ಏಕತೆ ಕಾಣುವ ನಾಡು ನಮ್ಮದು. ಇಂದು ವಿವಿಧ ಕಾರಣಗಳಿಂದ ನಾಡಿನವರಿಂದ ದೂರವಾಗುತ್ತಿರುವುದು ಕಂಡು ಬರುತ್ತಿದೆ. ನಾವೆಲ್ಲ ಇಂದು ಭಾಷಾಭಿಮಾನ ಹೊಂದಿ ನಾಡಿನಲ್ಲಿ, ಜೊತೆಗೆ ಹೊರಗೂ ಪಸರಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶಿ ಕಲೆಗಳು ಈ ನೆಲದ ಸಂಸ್ಕೃತಿಯನ್ನು ಉನ್ನತಿಕರಿಸಿವೆ ಆದ್ದರಿಂದ ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಕಲಾವಿದರು ತಂತ್ರಜ್ಞಾನವನ್ನು ಅರಿತು ತಮ್ಮನ್ನುತಾವು ತೆರೆದುಕೊಳ್ಳಬೇಕು. ಅಂದಾಗ ವಿಶ್ವಮಟ್ಟದಲ್ಲೂ ಕನ್ನಡ ಕಲಾವಿದರೂ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗಡಿನಾಡ ಕನ್ನಡ ಸಾಂಸ್ಕೃತಿಕ ಉತ್ಸವದ ಸರ್ವಾಧ್ಯಕ್ಷೆ ಸಾಹಿತಿ ರೋಹಿಣಿ ಯಾದವಾಡ ಅವರುಅಭಿಪ್ರಾಯ ಪಟ್ಟರು. 

ಅಥಣಿ ತಾಲೂಕಿಸ್ಙಿ ಚಮಕೇರಿ ಗ್ರಾಮದಲ್ಲಿ ಭಾನುವಾರ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಗಡಿನಾಡು ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡುತ್ತ, ಕನ್ನಡ ಭಾಷೆಯನ್ನು ವಿಶ್ವವ್ಯಾಪಿ ಪಸರಿಸುವ ಗುರುತರ ಜವಾಬ್ಧಾರಿ ಪ್ರತಿಯೊಬ್ಬ ಕನ್ನಡಿಗರ ಮೇಲಿದ್ದು, ನಾಡು, ನುಡಿ, ಸಂಸ್ಕತಿ, ಸಾಹಿತ್ಯ, ಕಲೆಗಳ ಕುರಿತು ಚಿಂತನಾಶೀಲ ಮನೋಭಾವ ಬೆಳೆಸಿದರೆ ಕನ್ನಡ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. 

ಜನಪದಗೀತೆ, ಕೋಲಾಟ, ಚೌಡಕಿ, ತತ್ವಪದ, ಭಜನೆ, ಯಕ್ಷಗಾನ, ಪರಿಜಾತ, ಸೋಬಾನೆ, ಬೀಸುಕಲ್ಲು, ಜೋಗುಳ ಪದಗಳನ್ನು ಯುವಜನತೆ ಕರಗತ ಮಾಡಿಕೊಳ್ಳಬೇಕು. ಆಡಳಿತ ಸುಗಮ ಹಾಗೂ ದಕ್ಷತೆ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಇನ್ನೊಂದು ಜಿಲ್ಲೆಯನ್ನಾಗಿ ಮಾಡಬೇಕು. ವಲಸೆ ಹೋಗುವ ಪರಿಸ್ಥಿತಿಗೆ ಶಾಶ್ವತ ಪರಿಹಾರ ಬೇಕು ಎಂದರು. 

ಸಾನಿಧ್ಯವನ್ನು ವಹಿಸಿದ್ದ ಕಕಮರಿಯ ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಮಾತನಾಡಿ, ಕನ್ನಡ ಉಳಿವಿಗೆ ಕೇವಲ ಘೋಷಣೆ, ಜಯಕಾರ, ಹಾಕಿದರೆ ಸಾಲದು ಮಾತು ಕೃತಿಯಾಗಿ ಆಚರಣೆಗೆ ಬರಬೇಕು. ಕನ್ನಡ ನಿತ್ಯ ನೂತನವಾಗಬೇಕು ಎನ್ನುತ್ತ ಪಠ್ಯಪುಸ್ತಕ ವಿತರಿಸುವಲ್ಲಿ ಕರ್ನಾಟಕ ಸರಕಾರ ಪಕ್ಕದ ಮಹಾರಾಷ್ಟ್ರದವರ ನೀತಿ ಅನುಸರಿಸಬೇಕು. ಅಲ್ಲಿ ಶಾಲೆ ಆರಂಭವಾಗುವ ಒಂದು ತಿಂಗಳ ಪೂರ್ವದಲ್ಲಿ ಪಠ್ಯಪುಸ್ತಕ ಒದಗಿಸುತ್ತಾರೆ ಎಂದರು. ಜಾತಿಗೊಂದು ಮಠ ಕಟ್ಟುವುದಕ್ಕಿಂತ ಭಾಷೆ ಉಳಿಸವ ಕಾರ್ಯ ಮಾಡಿ ಎಂದರು. 

ಲಲಿತ ಕಲಾ ಅಕಾಡೆಮಿ ಮಾಜಿ ಸದಸ್ಯ ಡಾ.ಪ್ರತಾಪ ಬಹುರೂಪಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕನ್ನಡ ನಮ್ಮ ಹೃದಯದಲ್ಲಿ ನೆಲೆಸಬೇಕು ಅಂದಾಗ ಕನ್ನಡಿಗರೆನಿಸಿಕೊಳ್ಳಲು ಯೋಗ್ಯರು. ಕನ್ನಡ ಅಭಿಮಾನ ಮೆರೆಯಿರಿ ಎನ್ನುತ್ತ, ಕಾಣದ ದೇವರಿಗೆ ಕೈ ಮುಗಿಯುವದಕ್ಕಿಂತ ಹೆತ್ತವರ ಸೇವೆ ಮಾಡುವುದು ಲೇಸು. ಅಪ್ಪ ಎಂದರೆ ಆಕಾಶ ಅಷ್ಟು ವಿಶಾಲವಾಗಿರುವ ಅಪ್ಪನ ಶ್ರಮ, ಅಮ್ಮನ ಆರೈಕೆಯಲ್ಲಿ ಮಕ್ಕಳಿಗೆ ಕಾಣುವುದೇ ಇಲ್ಲ. ಈ ಗಡಿ ಕನ್ನಡ ಸಂಸ್ಕೃತಿ ಉತ್ಸವದಲ್ಲಿ ಅಪ್ಪ ಪ್ರಶಸ್ತಿ ನೀಡಿದ ಸಂಘಟಕ ಮಹಾದೇವ ಬಿರಾದರ ಅವರು ಸಂಸ್ಕೃತಿ ಉಳಿಸುತ್ತಾರೆ ಎಂದರು.  

ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮತನಾಡಿ ಭಾಷೆ ಉಳಿದರೆ ಭಾವ ಉಳಿಯುತ್ತದೆ. ಭಾವನೆಯಲ್ಲಿ ಭಾಷೆ ಗಟ್ಟಿಯಾಗಿ ನೆಲೆಯೂರುವುದು. ಭಾವನೆಗಳ ಮೂಲಕ ಭಾಷೆ ಉಳಿಸುವ ಕಾರ್ಯ ಮಾಡಿ ಎಂದರು. 

ಹೊರನಾಡ ಕನ್ನಡಿಗರ ಸ್ಥಿತಿಗತಿ ಕುರಿತು ಪ್ರಕಾಶ ಪೂಜಾರಿ ಅವರು ಮಾತನಾಡಿದರು. ಗಡಿತಜ್ಞ ಡಾ. ರವೀಂದ್ರ ತೊಟಗೇರ, ಡಾ.ಮಹಾಂತೇಶ ಉಕ್ಕಲಿ, ಶಿವಪುತ್ರ ಯಾದವಾಡ, ಡಾ.ಪ್ರಿಯಂವದಾ ಹುಲಗಬಾಳಿ, ಯೋಗಗುರು ಎಸ್, ಕೆ ಹೊಳೆಪ್ಪನವರ, ವಿಜಯಪೂರ ಸಿಪಿಐ ಮಲ್ಲಿಕಾರ್ಜುನ ಸಿಂಧೂರ, ಡಾ.ಅರುಣಕುಮಾರ ರಾಜಮಾನೆ, ಸಾಹಿತಿ ಪ್ರಕಾಶ ಖೋತ, ಕರವೇ ಅಧ್ಯಕ್ಷ ಅಣ್ಣಾಸಾಹೇಬ ತೆಲಸಂಗ, ಕರವೇ ಕಾರ್ಯದರ್ಶಿ ರವಿ ಪೂಜಾರಿ, ರೈತ ಸಂಘದ ತಾಲೂಕಾಧ್ಯಕ್ಷ ಮಹಾದೇವ ಮಡಿವಾಳ, ಸಾಹಿತಿ ಪ್ರಭಾ ಬೊರಗಾಂವಕರ ಇತರರು ಉಪಸ್ಥಿತರಿದ್ದರು. 

ಅಧ್ಯಕ್ಷ ಮಹಾದೇವ ಬಿರಾದಾರ ಸ್ವಾಗತಿಸಿದರು. ಸುನೀಲ ಕಬ್ಬೂರ ಹಾಗೂ ಪ್ರೋ. ಓ.ಎಸ್ ವಂಟಗೂಡಿ ಅವರು ನಿರೂಪಿಸಿದರು. ವಿಜಯಪೂರ, ಅಥಣಿ ಹಾಗೂ ಬೇರೆ ಬೇರೆ ಕಡೆಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ನೃತ್ಯಗಳು ನಡೆದವು. ಸಂಜು ಪ್ರಾರ್ಥನಳ್ಳಿ ಅವರಿಂದ ಸುಗಮ ಸಂಗೀತ ನಡೆಯಿತು. ದುಂಡಪ್ಪ ಪೂಜಾರಿಯವರಿಂದ ಮಿಮಿಕ್ರೀ, ಶಿವಪ್ಪ ಕುಂಬಾರ ಇವರಿಂದ ಭಜನೆ, ಸುಭಾಸ ಪವಾರ ಅವರಿಂದ ಶಿವಾಜಿ ರೂಪಕ ಡೊಳ್ಳು ಕುಣಿತ ಮೊದಲಾದವು ನಡೆದವು. 


ಸುದ್ದಿ ಓದಿ