ನೂತನ ಪಲಕ್ಕಿ, ಬೆಳ್ಳಿ ಬಸವಣ್ಣನ ಮೂರ್ತಿ ಭವ್ಯ ಮೆರವಣಿಗೆ
ಯರಗಟ್ಟಿ 26: ಮನುಷ್ಯ ತನ್ನ ಅನಕೂಲಕ್ಕೆ ತಕ್ಕಂತೆ ಪೂಜಿಸುವದನ್ನು ಬಿಟ್ಟು ಉತ್ತಮ ನಡವಳಿಕೆ, ಸಂಸ್ಕಾರ ಹಾಗೂ ಶ್ರದ್ಧೆಯಿಂದ ದೇವರ ಆರಾಧನೆ ಮಾಡಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ ಎಂದು ತೊರಗಲ್ಲಮಠದ ದೀಪಕ ಸ್ವಾಮೀಜಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದಲ್ಲಿ ಇತ್ತೀಚಗೆ ಹಮ್ಮಿಕೊಂಡಿದ್ದ ನೂತನ ಪಲಕ್ಕಿ ಮತ್ತು ಬೆಳ್ಳಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ನೇರವೇರಿಸಿ ಅವರು ಆಶೀರ್ವಚನ ನೀಡಿದರು. ದೇವರು ಕಾಡುವನೆಂದು ಭಯದಿಂದ ಪೂಜಿಸದೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವದು ಮನುಷ್ಯನ ಪುಣ್ಯ ಪ್ರಾಪ್ತಿ ಹಾಗೂ ರಕ್ಷಣೆ ಸಾಧ್ಯ. ದಾನ ಧರ್ಮಗಳು ಶ್ರೇಷ್ಠವಾಗಿದ್ದು ಯುಗ ಯುಗಾಂತರದಲ್ಲಿ ಅವುಗಳು ಬದಲಾವಣೆಗೊಂಡು ಇಂದು ಭರವಸೆಯಲ್ಲಿಯೇ ದಾನ ಧರ್ಮಗಳು ವ್ಯಯವಾಗುತ್ತಿರುವದು ಖೇದದ ಸಂಗತಿ. ಮನುಷ್ಯ ಎಂದಿಗೂ ಕೊಡಗೈ ಆಗಬೇಕು ಎಂದರು.
ಹಿರೇಮಠದ ಈರಯ್ಯ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾಗಿದೆ. ಹಿಂದಿನ ಪರಂಪರೆ ಉಳಿಸಿ ಮುಂದಿನ ತಲೆಮಾರಿನ ಯುವಕರಿಗೆ ತಿಳಿಸಬೇಕಾದ ಕಾರ್ಯ ಹಿರಿಯರ ಮೇಲಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಪರಸ್ಪರ ಒಂದೆಡೆ ಸೇರಿ ಸುಖ ದುಖ ಹಂಚಿಕೊಳ್ಳಲು ಸಮಯವೇ ಸಿಗುತ್ತಿಲ್ಲ. ದುಡಿಮೆಯಲ್ಲಿಯೇ ದೇವರನ್ನು ಕಂಡ, ನುಡಿದಂತೆ ನಡೆದ ನಡೆದಂತೆ ನುಡಿದ ಹಿರಿಯರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದರು.
ಮುಂಜಾನೆ 6.30 ಕ್ಕೆ ನೂತನ ಬಸವಣ್ಣನ ಮೂರ್ತಿಗೆ, ಪಲಕ್ಕಿಗೆ ವಿಶೇಷ ಪೂಜಿ ಸಲ್ಲಿಸಿ ಗ್ರಾಮದ ವಿವಿಧ ರಸ್ತೆಗಳ ಮೂಲಕ ಸುಮಂಗಲೆಯರಿಂದ ಕುಂಭಮೇಳಗಳೊಂದಿಗೆ ಝಾಂಜ ಪತಕ, ಕರಡಿ ಮಜಲು ವಿವಿಧ ವಾಧ್ಯಗಳೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಲುಪಿತು. ಮಹಾಪ್ರಸಾದ ಜರುಗಿತು.
ವೇದಮೂರ್ತಿ ಜಗದೀಶ ಹೊಸಮಠ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ವೀರ್ಪ ಬೆನಕಟ್ಟಿ, ಶ್ರೀಶೈಲ ಸರದಾರ, ಪಂಚಪ್ಪ ಶಿವಪೂಜಿ, ಸಾತವೀರ್ಪ ಶೀಲವಂತರ, ಬಸಪ್ಪ ರೊಕ್ಕದಕಟ್ಟಿ, ಧರ್ಮೆಂದ್ರ ದುಂಡನಕೊಪ್ಪ, ಶಿವಬಸಪ್ಪ ಉಪ್ಪಿನ, ಚಂಬನ್ನ ಲಕ್ಕನ್ನವರ, ಎಮ್.ವಿ.ಉಪ್ಪಿನ, ವಿ.ವಿ.ಸರದಾರ, ಸಹದೇವಪ್ಪ ಉಪ್ಪಿನ, ಬಸವರಾಜ ಗಾಣಿಗೇರ ಸೇರಿದಂತೆ ಹಾದಿ ಬಸವೇಶ್ವರ ಗಜಾನನ ಕಮೀಟಿ ಸದಸ್ಯರು ಗ್ರಾಮಸ್ಥರು ಇದ್ದರು.