ನೂತನ ಗಡ್ಡಿ ತೇರು ಪುರ ಪ್ರವೇಶದ ಉದ್ಘಾಟನೆ
ಬ್ಯಾಡಗಿ :ತಾಲೂಕಿನ ಮಾಸಣಗಿ ಗ್ರಾಮದ ಪುರಾತನ ಕಾಲದವೀರಭದ್ರೇಶ್ವರ ಸ್ವಾಮಿಯ ರಥೋತ್ಸವದ ಸಲುವಾಗಿ ಸದ್ಭಕ್ತರ ನೆರವಿನಿಂದ 20 ಲಕ್ಷ ರೂ.ಗಳ ವೆಚ್ಚದಲ್ಲಿ ನೂತನವಾಗಿ ಗಡ್ಡಿ ತೇರು ಪುರ ಪ್ರವೇಶದ ಉದ್ಘಾಟನೆಯನ್ನು ನೆಗಳೂರ ಮಠದ ಗಂಗಾಧರಯ್ಯ ಹಿರೇಮಠ ನೆರವೇರಿಸಿ ಮಾತನಾಡಿದರು. ಗ್ರಾಮಸ್ಥರೆಲ್ಲಾ ಏಕ ಮನಸ್ಸಿನಿಂದ ರಥ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ, ಮನುಷ್ಯನ ವೈಯಕ್ತಿಕ ಸ್ವಾರ್ಥ ಸಾಧನೆಗಾಗಿ ಭೂಮಿಯ ಮೇಲೆ ಅನೀತಿ, ಅನಾಚಾರ ತಾಂಡವವಾಡುತ್ತಿವೆ. ಮನುಷ್ಯರಿಂದ ನಡೆದಿರುವ ಎಲ್ಲ ಅಧರ್ಮಗಳನ್ನು ಭೂತಾಯಿ ತಾಳ್ಮೆಯಿಂದ ಸಹಿಸಿಕೊಂಡಿದ್ದು ಒಂದು ಕ್ಷಣ ತಾಳ್ಮೆ ಕಳೆದುಕೊಂಡು ಮುನಿದರೆ ಅಚಾತರ್ಯ ಸಂಭವಿಸುವ ಆತಂಕ ಹೆಚ್ಚಿದೆ. ಇಂಥ ಸಂದಿಗ್ನ ಸನ್ನಿವೇಶದಲ್ಲಿ ವೈಯಕ್ತಿಕ ಸ್ವಾರ್ಥ ಬದಿಗೊತ್ತಿ ಸಮಾಜದ ಹಿತಕ್ಕೆ ಶ್ರಮಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಜಾಗೃತಗೊಳ್ಳಬೇಕಿದೆ. ಅಂದಾಗ ಮಾತ್ರವೇ ಸುಂದರ, ಸದೃಢ ಸಮಾಜ ನೆಲೆಯೂರಲಿದೆ ಎಂದು ನುಡಿದರು.ನಂತರ ಮೇಗಟ್ಟಿ ಬಸವಣ್ಣನ ಚಾವಡಿಯಿಂದ ಆರಂಭಗೊಂಡ ರಥೋತ್ಸವ ಮುಖ್ಯ ರಸ್ತೆಯಲ್ಲಿ ಸಂಚರಿಸಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಂಗಲಗೊಂಡಿತು. ಮಹಿಳೆಯರ ಡೊಳ್ಳು ಕುಣಿತ, ವೀರಗಾಸೆ, ನಂದಿ ಕೋಲು ಕುಣಿತ, ಝಾಂಜ್, ಭಜನಾ ಮೇಳಗಳು ರಥೋತ್ಸವದಲ್ಲಿ ಸಂಭ್ರಮ ನೆಲೆಯೂರುವಂತೆ ಮಾಡಿದ್ದವು. ಈ ಸಂದರ್ಭದಲ್ಲಿ ಮಲಕಪ್ಪ ಮುಳಗುಂದ, ಬಸಪ್ಪ ಬನ್ನಿಹಟ್ಟಿ, ನಿಂಗಪ್ಪ ಹೆಗ್ಗಣ್ಣನವರ, ಈರಣ್ಣ ಬಂಗೇರ, ಮಲ್ಲಪ್ಪ ದೇಸಾಯಿ, ಶಂಭಣ್ಣ ಹಿರೇಮಠ, ಜಮದಜ್ಞೆಪ್ಪ ಕೆಪ್ಲಲಿಂಗಣ್ಣವರ, ಪ್ರಕಾಶ ಬನ್ನಿಹಟ್ಟಿ, ಬಸವರಾಜ ಬನ್ನಿಹಟ್ಟಿ, ಈರಯ್ಯ ಮಾನಿಹಳ್ಳಿಮಠ, ಈರ್ಪ ಬನ್ನಿಹಟ್ಟಿ ಸೇರಿದಂತೆ ಉಪಸ್ಥಿತರಿದ್ದರು.