ಕರ್ತವ್ಯ ಲೋಪ; ಪಿಎಸ್ಐ ಅಮಾನತ್
ಕಾರವಾರ, 18 : ಕದ್ರಾದ ಯುವತಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಕದ್ರಾ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ ಬಂಡವಡ್ಡರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್ ಆದೇಶ ಹೊರಡಿಸಿದ್ದಾರೆ.
ರಿಶೆಲ್ ಆತ್ಮಹತ್ಯೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್ ನಾಯಕಿ ಚೈತ್ರಾ ಅವರ ಪುತ್ರ ಚಿರಾಗ್ ಮೇಲೆ ರಿಶೆಲ್ ಕುಟುಂಬ ಪ್ರಕರಣ ದಾಖಲಿಸಿದೆ. ಮಗಳ ಆತ್ಮಹತ್ಯೆಗೆ ಚಿರಾಗ್ ಮಾನಸಿಕ ಒತ್ತಡ ಕಾರಣ ಎಂದಿದೆ. ರಿಶೆಲ್ ಮರಣೋತ್ತರ ಪರೀಕ್ಷೆ ಮತ್ತೊಮ್ಮೆ ನಡೆಸಲು ಮನವಿ ಮಾಡಿದೆ. ರಿಶೆಲ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ನಡೆಸಿದ ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಮೃತಳ ಕುಟುಂಬದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ತನಿಖೆಯ ಸಂದರ್ಭದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ. ಜೊತೆಗೆ ಸಾಕ್ಷ್ಯ ಸಂಗ್ರಹದಲ್ಲಿ ಗಂಭೀರ ಲೋಪವಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಆಂತರಿಕ ತನಿಖೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ದೀಪನ್, ತನಿಖೆಯಲ್ಲಿ ಕಂಡುಬಂದ ವೈಫಲ್ಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಪಿಎಸ್ಐ ಸುನೀಲ್ ಬಂಡೀವಡ್ಡರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ ಆದೇಶ ಹೊರಡಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಕದ್ರಾ ಸಿಪಿಐ ಹಾಗೂ ಹಿರಿಯ ಅಧಿಕಾರಿಗಳ ಮೂಲಕ ಸಮಗ್ರವಾಗಿ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.