ಕಾರವಾರ

ಜಿಲ್ಲೆಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ:

ಜಿಲ್ಲೆಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ:

ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಯೋಜನೆಗಳನ್ನು ಶ್ರದ್ಧೆಯಿಂದ ಕಾರ್ಯರೂಪಕ್ಕೆ ತನ್ನಿ- ಶ್ಯಾಮಲಾ ಕುಂದರ್  

ಕಾರವಾರ 20 : ಮಹಿಳೆಯರ ರಕ್ಷಣೆ ಮತ್ತು ಸುಭದ್ರತೆಗೆ ಒತ್ತು ನೀಡುವಂತಹ ಸಾಕಷ್ಟು ಯೋಜನೆಗಳಿವೆ. ಅವುಗಳನ್ನು ಶ್ರದ್ಧೆಯಿಂದ ಕಾರ್ಯರೂಪಕ್ಕೆ ತನ್ನಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ  ಕುಂದರ್ ಹೇಳಿದರು. 

ಕಾರವಾರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮಹಿಳಾ ಆಯೋಗವು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು  

ಎಲ್ಲಾ ವರ್ಗದ  ಮಹಿಳೆಯರಿಗೂ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸಬೇಕಿದೆ. ಅಂಬೇಡ್ಕರ್ ಸಂವಿಧಾನದಲ್ಲಿ ಮಹಿಳೆಯರಿಗೆ ನೀಡಿದ ಒತ್ತನ್ನು ಗಮನಿಸಿ ಎಂದ ಅವರು  ಸಖಿ, ಸ್ವಾಧರ, ಸಾಂತ್ವಾನ ಹಾಗೂ ಸ್ವೀಕಾರ ಕೇಂದ್ರದ ಯೋಜನೆ ಮತ್ತು ಮಾಹಿತಿಗಳ ಬಗ್ಗೆ ಗ್ರಾಮೀಣ ಮಟ್ಟದ ಮಹಿಳೆಯರಿಗೂ ತಲುಪುವಂತೆ ಜಾಗೃತಿ ಮೂಡಿಸಬೇಕಿದೆ ಎಂದರು. ಸ್ವಾಧರ ಮತ್ತು ಸಖಿ ಯೋಜನೆಗಳು ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಹೆಚ್ಚಿನ ಗಮನ ಹರಿಸಬೇಕೆಂದು ಜಿಲ್ಲಾಧಿಕರಿಗಳಿಗೆ ಸೂಚಿಸಿದರು. 

ಜಿಲ್ಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ಯಾಮಲಾ ಸಿ.ಕೆ ಸಭೆೆಗೆ ಮಾಹಿತಿ ನೀಡಿ 2020-21ನೇ ಸಾಲಿನಲ್ಲಿ ಕೌಟುಂಬಿಕಾ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಒಟ್ಟೂ 168 ಪ್ರಕರಣಗಳು ದಾಖಲಾಗಿದ್ದು, 164 ಪ್ರಕರಣಗಳು ಇತ್ಯರ್ಥವಾಗಿದೆ ಹಾಗೂ 4 ಪ್ರಕರಣಗಳು ಬಾಕಿ ಉಳಿದಿದೆ, ಏಪ್ರಿಲ್ ನಂತರ 6 ಪ್ರಕರಣಗಳು ದಾಖಲಾಗಿದ್ದು 2 ಪ್ರಕರಣಗಳು ಇತ್ಯರ್ಥವಾಗದೇ ಉಳಿದಿದೆ. ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಟಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2020-21ರ ಮಾರ್ಚ್‌ ವರೆಗೆ 2 ಪ್ರಕರಣಗಳು ದಾಖಲಾಗಿದ್ದು ಅವುಗಳು ತನಿಖೆಯಲ್ಲಿವೆ. ಮಾರ್ಚ್‌ ನಂತರ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಒನ್ ಸ್ಟಾಪ್ ಸೆಂಟರ್‌ನಲ್ಲಿ 42 ಪ್ರಕರಣಗಳು ದಾಖಲಾಗಿದ್ದು 33 ಪ್ರಕರಣಗಳು ಇತ್ಯರ್ಥವಾಗಿದೆ. ಎಪ್ರಿಲ್‌ನಿಂದ ಈ ವರೆಗೆ 9 ಪ್ರಕರಣಗಳು ದಾಖಲಾಗಿದೆ ಎಂದರು. 

ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ 2020-21ರ ಮಾರ್ಚ್‌ ವರೆಗೆ 21 ಬಾಲ್ಯವಿವಾಹವನ್ನು ತಡೆಯಲಾಗಿದೆ, ಎಪ್ರಿಲ್ ನಂತರ 2 ಬಾಲ್ಯವಿವಾಹವನ್ನು ತಡೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.   

ಕೋವಿಡ್ ಕಾರಣದಿಂದಾಗಿ ಶಾಲಾ ಕಾಲೇಜುಗಳು ತೆರೆದಿರುವುದಿಲ್ಲ ಇದರ ಪರಿಣಾಮವಾಗಿ ಬಾಲ್ಯವಿವಾಹಗಳನ್ನ ಗುರುತಿಸುವುದು ಕಷ್ಟಸಾದ್ಯವಾಗಿದೆ, ಅದರಬಗ್ಗೆ ಗಮನಹರಿಸುದರೊಂದಿಗೆ ಮಹಿಳಾ ಆಯೋಗ ಸೇರಿದಂತೆ ಮಕ್ಕಳ ಕಲ್ಯಾಣಕ್ಕಾಗಿ ಎಲ್ಲಾ ವಿಭಾಗದಿಂದ ಒಟ್ಟಾಗಿ ಜಾಗೃತೆ ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿದರು. ಉಳಿದಂತೆ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಹಾಗೂ ಮಹಿಳಾ ಆಯೋಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ