ಜೂ.25ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ
ಇಂಡಿ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಜೂ. 25ರಂದು ಬೆಳಗ್ಗೆ 10.30 ರಿಂದ ಸಂಜೆ 5 ರವರೆಗೆ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಶ್ರೀನಿವಾಸ ಬುದಾರಪುರ ಹೇಳಿದರು.
ಅವರು ಶನಿವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದೆ ಎಂದರು.
ಕಳೆದ ಬಾರಿ ಮಾರ್ಚ 12 ರಂದು ನಡೆದ ಲೋಕ ಅದಾಲತ್ನಲ್ಲಿ 2986 ಪ್ರಕರಣಗಳು ಇತ್ಯರ್ಥಗೊಂಡಿವೆ. ಮತ್ತು 48 ಲಕ್ಷ 25 ಸಾವಿರ 846 ರೂ. ಸರ್ಕಾರಕ್ಕೆ ಭರಣಾ ಮಾಡಲಾಗಿದೆ ಎಂದರು.
ಈ ಅದಾಲತ್ ನಲ್ಲಿ ಜೀವನಾಂಶ ಪ್ರಕರಣ, ಧಾರ್ಮಿಕ ವಿವಾದ, ಹೊಲ, ಮನೆ, ಬ್ಯಾಂಕು, ಅಪಘಾತ, ಚೆಕ್ ಬೌನ್ಸ, ಜನನ, ಸಹಕಾರಿ, ಸಣ್ಣ ಪುಟ್ಟ ಗಲಾಟೆ, ಆರೋಪ ಸೇರಿದಂತೆ ಇನ್ನಿತರ ಪ್ರಕರಣಗಳನ್ನು ವಿಚಾರಣೆ ಮಾಡುವದರ ಮೂಲಕ ಅಂದೇ ಅಂತಿಮ ನಿರ್ಣಯದ ಮೂಲಕ ರಾಜಿ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಅದಾಲತನಲ್ಲಿ ಇಬ್ಬರಿಗೂ ತೃಪ್ತಿಯಾಗುವ ತೀರ್ಮಾನ ಮಾಡಲಾಗುತ್ತದೆ. ಲೋಕ್ ಅದಾಲತನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಇತ್ಯರ್ಥ್ಯ ಪಡಿಸಿಕೊಳ್ಳಲು ಅವಕಾಶವಿದೆ. ಅಲ್ಲದೆ ನ್ಯಾಯಾಲಯಕ್ಕೆ ಯಾವುದೇ ಶುಲ್ಕ ಪಾವತಿ ಮಾಡದೇ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ಮೊದಲೇ ಶುಲ್ಕ ಪಾವತಿ ಮಾಡಿದಲ್ಲಿ ಪಾವತಿ ಮಾಡಿದ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ ಎಂದು ತಿಳಿಸಿದರು.
ನೇರವಾಗಿಯೂ ಭಾಗವಹಿಸಬಹುದು. ಇಬ್ಬರಿಗೂ ತೃಪ್ತಿಯಾದರೆ ಮಾತ್ರ ಇತ್ಯರ್ಥ ಮಾಡುತ್ತೇವೆ. ಮತ್ತೆ ಮೇಲ್ಮನವಿಗೆ ಅವಕಾಶ ಇರುವದಿಲ್ಲ. ಕೌಟುಂಬಿಕ ಕಲಹಗಳನ್ನು ರಾಜಿ ಸಂಧನದ ಮೂಲಕ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.
ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಈಶ್ವರ ಎಸ್.ಎಂ, ವಕೀಲರಾದ ಎಸ್.ಆರ್. ಬಿರಾದಾರ, ಜೆ.ಬಿ.ಬೇನೂರ ಇದ್ದರು.