ಕಾರವಾರ

ಲಿಂಗಾನುಪಾತ ತಾರತಮ್ಯ ನಿವಾರಣೆಗೆ ಮುಂದಾಗಿ

ಲಿಂಗಾನುಪಾತ ತಾರತಮ್ಯ ನಿವಾರಣೆಗೆ ಮುಂದಾಗಿ

ಜಿಪಂ ಸಿಇಒ ಪ್ರಿಯಾಂಗಾ ಸಲಹೆ | ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕಾರವಾರ 29: ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ರಾಷ್ಟ್ರ, ರಾಜ್ಯ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು-ಗಂಡಿನ ಲಿಂಗಾನುಪಾತದಲ್ಲಿ ವ್ಯತ್ಯಾಸಕಾಣುತ್ತಿದೆ ಎಂದು ಜಿಲ್ಲಾ ಪಂಚಯತ್ ಸಿಇಒ ಪ್ರಿಯಾಂಗಾ ಎಂ. ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಿಂದ ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಶುಕ್ರವಾರ ನಡೆದರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇತ್ತೀಚೆಗೆ ಹೆಣ್ಣು ಭ್ರೂಣ ಹತ್ಯೆ, ಅತ್ಯಚಾರ, ಕಿರುಕುಳದಂತ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದರ ಪರಿಣಾಮವೆಂಬಂತೆ 2011ರ ಜನಗಣತಿಯ ಪ್ರಕಾರ ಪ್ರತಿ 1000 ಸಾವಿರ ಪುರುಷರಿಗೆ 990 ಮಹಿಳೆಯರಿದ್ದು, ಲಿಂಗನುಪಾತದಲ್ಲಿ ವ್ಯತ್ಯಾಸವಾಗುತ್ತಿದೆ. ಅಲ್ಲದೇ ಪ್ರಾಥಮಿಕ ಹಾಗೂ ಪ್ರೌಢ ಹಂತದಲ್ಲಿ ಶಿಕ್ಷಣ ಪಡೆಯುವವರ ಪೈಕಿ ಶೇ. 57ರಷ್ಟು ಹೆಣ್ಣು ಮಕ್ಕಳು ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಪಡೆಯುವಲ್ಲಿ ಕಡಿಮೆಯಾಗುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ನಾಗರಿಕರು ಪುರುಷರಿಗೆ ಕೊಡುವಷ್ಟೇ ಪ್ರಾಶಸ್ತ್ಯವನ್ನು ಹೆಣ್ಣು ಮಕ್ಕಳಿಗೂ ನೀಡುವ ಮೂಲಕ ಈ ಲಿಂಗಾನುಪಾತ ತಾರತಮ್ಯದ ನಿವಾರಣೆಗೆ ಮುಂದಾಗಬೇಕಿದೆ ಎಂದರು.

ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್‍ನಿಂದ ವಿವಿಧಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಪ್ರಸಕ್ತ ವರ್ಷದಿಂದ ‘ಮಾದರಿ ಸಿಇಒ’ ಎಂಬ ನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಇದರಡಿ ಹೆಣ್ಣು ಮಕ್ಕಳಿಗೆ ಜಿಲ್ಲಾ ಪಂಚಯತ್‍ನಕಾರ್ಯ ವೈಕರಿಹಾಗೂ ಲಭ್ಯವಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಮೂಲಕ ಸ್ಫೂರ್ತಿ ತುಂಬಲಾತ್ತದೆ. ಒಂದು ದಿನದ ಮಟ್ಟಿಗೆ ಸಿಇಒ ಆಗಿ ಕಾರ್ಯನಿರ್ವಹಿಸುವ ಹೆಣ್ಣು ಮಗಳಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಜಿಲ್ಲಾ ಪಂಚಾಯತ್‍ನ ವಿವಿಧ ವಿಭಾಗಗಳನ್ನು ತೋರಿಸಿ ಅಲ್ಲಿ ನಡೆಯುವಂತಹ ಕಾರ್ಯ ಹಾಗೂ ತಮಗೆ ಸಿಗಬಹುದಾದ ಸರಕಾರಿ ಸೌಲಭ್ಯಗಳ ಬಗ್ಗೆ ತಿಳಿಸಲಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೆರ ಮಾತನಾಡಿ, 

ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಗಳಿದ್ದು, ಮಹಿಳೆ ತನ್ನಲ್ಲಿರುವ ಹಿಂಜರಿಕೆ ಮನೋಭಾವದಿಂದ ಹೊರಬರಬೇಕಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹಿಳೆಗೆ ಸಾಕಷ್ಟು ಅವಕಾಶಗಳಿದ್ದು, ಹೆಣ್ಣು ಮಕ್ಕಳು ನಾಲ್ಕು ಗೋಡೆಗೆ ಸೀಮಿತವಾಗಬಾರದು. ಮಹಿಳೆಯರು ಉತ್ತಮ ಕೆಲಸ ಕಾರ್ಯಗಳ ಮೂಲಕ ಸಮಾಜ ಹಾಗೂ ಪಾಲಕರಿಗೆ ಕೀರ್ತಿ ತಂದು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.

ದೇಹಲಿಯಲ್ಲಿ 2020ರಲ್ಲಿ ಜರುಗಿದರಾಷ್ಟ್ರ ಮಟ್ಟದ ಶಾಲಾ ವಿಭಾಗದ49 ಕೆಜಿ ವಿಭಾಗದಲ್ಲಿ ಭಾಗವಹಿಸಿದ್ದ ಕುಸ್ತಿ ಪಟು ಹಾಗೂ ಹಳಿಯಾಳ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿ ಶಾಲಿನಾ ಶಾಯರ್ ಸಿದ್ಧಿ ಅವರು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ನಂತರದಲ್ಲಿ ಅವರೇ ‘ಮಾದರಿ ಸಿಇಒ’ ಆಗಿ ಅಧಿಕಾರ ಸ್ವೀಕರಿಸಿ ಕಾರ್ಯ ನಿರ್ವಹಿಸಿದರು.

ವಕೀಲ ವರದಾ ಡಿ. ನಾಯ್ಕ್ ಅವರು ‘ಮಹಿಳೆಯರ ಸಬಲೀಕರಣ’ದ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯತ್‍ನ ಮುಖ್ಯ ಲೆಕ್ಕಧಿಕಾರಿ ಸಂಗೀತಾಗಜಾನನ ಭಟ್, ಮುಖ್ಯಯೋಜನಾಧಿಕಾರಿ ವಿನೋದಅಣವೇಕರ್, ಅಕ್ಷರದಾಸೋಹದ ಶಿಕ್ಷಣಾಧಿಕಾರಿ ವಿನೋದ ನಾಯಕ, ಆಡಳಿತ ವಿಭಾಗದ ಉಪ ಕಾರ್ಯದರ್ಶಿ ನಾಗೇಶ್‍ರಾಯ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಜಿ. ಪದ್ಮಾವತಿ, ಎಸ್‍ಬಿಎಮ್‍ನ ಜಿಲ್ಲಾ ಸಮಾಲೋಚಕ ಸೂರ್ಯನಾರಾಯಣ ಭಟ್ಟ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂಧಿ ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಸುದ್ದಿ ಓದಿ