ಬ್ಯಾಡ್ಗಿ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ರಾಜ್ಯೋತ್ಸವ ಆಚರಣೆ

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ರಾಜ್ಯೋತ್ಸವ ಆಚರಣೆ

ಬ್ಯಾಡಗಿ:ಕನ್ನಡ, ಇದೊಂದು ಭಾಷೆ ಎನ್ನುವುದಕ್ಕಿಂತ ಎರಡು ಸಾವಿರ ವರ್ಷಗಳಿಂದ ಮುಂದುವರೆದು ಬಂದಿರುವ ಸಂಸ್ಕೃತಿ ಆದರೆ ಕನ್ನಡ ಭಾಷೆ, ಕನ್ನಡಿಗರು ಹಾಗೂ ಕರ್ನಾಟಕ ಈ ಮೂರು ಆತಂಕದಲ್ಲಿದ್ದು ಕನ್ನಡದ ಅಸ್ಮಿತೆ ಉಳಿಸಬೇಕಾಗಿದೆ, ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.

  ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ವನ್ನುದ್ದೇಶಿಸಿ ಅವರು ಮಾತನಾಡಿದರು. 

ಅಭಿಮಾನ ಶೂನ್ಯರಾಗಬೇಡಿ: ಮಾತೃಭಾಷೆ ಎಂಬುದು ರಾಜ್ಯದಲ್ಲಿ ನೆಲೆಸಿರುವ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಸಂಕೇತವಾ ಗಬೇಕು, ಆದರೆ ಅಭಿಮಾನ ಶೂನ್ಯತೆ ಹಾಗೂ ಇಚ್ಛಾಶಕ್ತಿ ಕೊರತೆ ಕಾರಣ ಕನ್ನಡ ಭಾಷೆಯ ಮೇಲೆ ಕಾರ್ಮೋಡಗಳು ಆವರಿಸಿದ್ದು, ಇನ್ನಾದರೂ ನಾವೆಲ್ಲರೂ ಸೇರಿ ಕನ್ನಡದ ಹಿಂದಿನ ಗತವೈಭವ ಮರಳಿಸಲು ಪ್ರಯತ್ನಿಸೋಣ ಎಂದರು.

ಭಾಷೆ ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ: ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿ ಎನ್ನುವುದು ತಪ್ಪೆಂದು ಭಾವಿಸಲಾಗುತ್ತಿದೆ ಕನ್ನಡ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರೂ ಸಹ ಉಂಡ ಮಮನೆಗೆ ದ್ರೋಹವೆಸಗುತ್ತಿದ್ದಾರೆ ಭಾಷೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಇದನ್ನೇ ನೆಪವನ್ನಾಗಿ ಮಾಡಿಕೊಂಡು ಇಂಗ್ಲಿಷ್ ಹಿಂದಿ ಭಾಷೆಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ ವಾಸವಿರುವ ಪ್ರದೇಶದಲ್ಲಿ ಸ್ಥಳೀಯ ಭಾಷೆಯನ್ನು ಕಲಿಯುವಂತೆ ಕಡ್ಡಾಯವಾದ ನಿಯಮಗಳನ್ನು ತರಬೇಕಾಗಿದೆ ಎಂದರು. 

ಕನ್ನಡ ರಾಜ್ಯ ಭಾಷೆಯಾಗಬೇಕು: ಮಾತೃಭಾಷೆಯ ಕುರಿತು ವಿವರಣೆ ತಿರುಚಲಾಗುತ್ತಿದ್ದು ಕನ್ನಡಭಾಷೆಯನ್ನು ಹತ್ತಿಕ್ಕಲಾಗುತ್ತಿದೆ, ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ರಾಜ್ಯಭಾಷೆಯನ್ನಾಗಿ ಪರಿವರ್ತಿಸಿ ರಾಜ್ಯದಲ್ಲಿ ನೆಲೆಸುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿಯಬೇಕು ಮತ್ತು ಮಕ್ಕಳಿಗೂ ಕನ್ನಡವನ್ನು ಭಾಷೆಯನ್ನಾಗಿ ಕಲಿಯುವಂತೆ ಮಾಡಬೇಕಾಗಿದೆ ಎಂದರು.  

 ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ತಹಶೀಲ್ದಾರ ಎಸ್.ಎ.ಪ್ರಸಾದ ಮಾತನಾಡಿದರು,  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಫಕ್ಕೀರಮ್ಮ ಛಲವಾದಿ, ಚಂದ್ರಣ್ಣ ಶೆಟ್ಟರ, ಗಾಯತ್ರಿ ರಾಯ್ಕರ್, ಮಾಜಿ ಸದಸ್ಯ ಮುರಿಗೆಪ್ಪ ಶೆಟ್ಟರ, ಮಂಜುನಾಥ ಬೋವಿ, ಸರೋಜಾ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕ ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸುದ್ದಿ ಓದಿ