ನಂದಿಹಳ್ಳಿ ಹದಗೆಟ್ಟ ರಸ್ತೆ : ಸಂಚಾರ ಅಯೋಮಯ
ಲೋಕದರ್ಶನ ವರದಿ
ಹೂವಿನಹಡಗಲಿ 24: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾನಾ ಹಳ್ಳಿ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ಅಯೋಮಯವಾಗಿದೆ. ಈ. ಬಗ್ಗೆ ಶಾಸಕರು, ಮಾಜಿ ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಇಲ್ಲ, ಒಂದು ತಿಂಗಳಲ್ಲಿ ರಸ್ತೆ ದುರಸ್ತಿ ಆಗದಿದ್ದರೆ ಪ್ರತಿಭಟನೆ ಮಾಡುವುದಾಗಿ ನಂದಿಹಳ್ಳಿ ಗ್ರಾಮಸ್ಥರಾದ ಪತ್ರಕರ್ತ ವಿ.ಬಿ.ಮಲ್ಲಪ್ಪ, ಕೊಟ್ರೇಶ ವಿ.ಬಿ., ಬಿ.ಶಿವಪುತ್ರ್ಪ, ಮಲ್ಲನಗೌಡ, ಕಂಠಿ ವೀರೇಶ ಎಚ್ಚರಿಕೆ ನೀಡಿದ್ದಾರೆ.ದೂರ: ಸೋಗಿ ಕ್ರಾಸ್ ನಿಂದ ನಂದಿಹಳ್ಳಿ ಹೋಗುವ ರಸ್ತೆಯಲ್ಲಿ ತಗ್ಗು, ಗುಂಡಿಗಳುಬಿದ್ದಿರುವುದರಿಂದ 3 ಕಿ.ಮೀ.ದೂರವಿರುವ ಗ್ರಾಮಗಳನ್ನು ತಲುಪಬೇಕಾದರೆ ಗಂಟೆಗಟ್ಟಲೇ ಹೋಗಬೇಕಾದ ಅನಿವಾರ್ಯತೆ ಇದೆ. ಇನ್ನು ಈ ರಸ್ತೆಗಳು ಹದಗೆಟ್ಟಿರುವುದರಿಂದ ಗ್ರಾಮಗಳಿಗೆ ಖಾಸಗಿ ವಾಹನಗಳು ಬರುತ್ತಿಲ್ಲ. ರಸ್ತೆಗಳು ಡಾಂಬರೀಕರಣದಿಂದ ವಂಚಿತಗೊಂಡಿದ್ದು, ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.ಈಗಾಗಲೇ ಸುಮಾರು ? 3ಕೋಟಿ ರೂ. ರಸ್ತೆ ಅಭಿವೃದ್ಧಿ ಗೆ ಶಾಸಕರಾದ ಕೃಷ್ಣನಾಯಕ ಭೂಮಿ ಪೂಜೆಯನ್ನು ಮಾಡಿದರು ಆದರೆ ಸರ್ಕಾರದ ಅನುದಾನ ಕೊರತೆಯಿಂದ ರಸ್ತೆ ಅಭಿವೃದ್ಧಿ ಕುಂಠಿತವಾಗಿದೆ ಎನ್ನಲಾಗಿದೆ. ಕೂಡಲೇ ರಸ್ತೆ ಡಾಂಬರೀಕರಣ ಮಾಡಲು ನಂದಿಹಳ್ಳಿ ಗ್ರಾಮಸ್ಥರು ಆಗ್ರಹಿಸಿದರು.