ನೆರೆಯಿಂದ ನನ್ನ ಮನೆಯೂ ಮುಳಗಿದೆ, ಅನ್ಯರ ಉಪದೇಶ ಅನಗತ್ಯ : ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ
ಬೆಂಗಳೂರು, ತಾವು ಪ್ರವಾಹ ಪೀಡಿತ ಪ್ರದೇಶದಿಂದಲೇ ಬಂದವನಾಗಿದ್ದು, ಈ ವಿಷಯದಲ್ಲಿ ಅನ್ಯರಿಂದ ಉಪದೇಶ ಪಡೆಯುವ ಅಗತ್ಯ ಇಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ತಮ್ಮ ಕೊಠಡಿಯ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು,ಅದ್ಧೂರಿ ಪೂಜೆಯನ್ನು ಏನೂ ಮಾಡಿಲ್ಲ.ಕಚೇರಿ ಪೂಜೆ ಹಿನ್ನಲೆಯಲ್ಲಿ ಅಥಣಿಯಿಂದ 150 ಜನ ಪಕ್ಷದ ಕಾರ್ಯಕರ್ತರು ಬಂದಿದ್ದರು ಅವರಿಗೆ ಊಟ, ಉಪಹಾರ ನೀಡಿದ್ದೇವೆ ಅಷ್ಟೇ.ಬಂದವರು ಕನಿಷ್ಟ ಊಟೋಪಚಾರವನ್ನು ಮಾಡುವ ಹಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರವಾಹದ ವೇಳೆ ನೆರೆಸಂತ್ರಸ್ತ ಪ್ರದೇಶದಲ್ಲಿ ಹತ್ತು ದಿನ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿ ಬಂದಿದ್ದೇನೆ,ತಮ್ಮ ಮನೆಯೂ ಸಹ ಮುಳುಗಡೆ ಆಗಿದೆ.ನೆರೆ ಸಂತ್ರಸ್ಥರ ಕಷ್ಟ ತಮಗೆ ತಿಳಿದಿದ್ದು ಹೀಗಾಗಿ ಬೇರೆಯವರ ಕಡೆಯಿಂದ ನಾನು ಉಪದೇಶ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರಿಗೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಹೆಚ್ಚುವರಿ ಬಸ್ಗಳನ್ನು,ವಿಶೇಷ ಬಸ್ಗಳನ್ನು ವ್ಯವಸ್ಥೆ ಮಾಡಿದ್ದೇವೆ, ಜನರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.
ಇನ್ನು ಹಬ್ಬದ ಸಮಯದಲ್ಲಿ ಓಡಿಸಲಾಗುತ್ತಿರುವ ವಿಶೇಷ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಳ ವಿಚಾರವಾಗಿ ಮಾತನಾಡಿದ ಅವರು, ಬಸ್ಗಳ ಟಿಕೆಟ್ ದರವನ್ನು ಅಷ್ಟೇನೂ ಹೆಚ್ಚಿಸಿಲ್ಲ, ಟಿಕೆಟ್ ದರ ಹೆಚ್ಚಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ, ನಾಳೆ ಅಧಿಕಾರಿಗಳ ಸಭೆ ಕರೆದಿದ್ದೇನೆ, ಖಾಸಗಿ ಬಸ್ಗಳ ಟಿಕೆಟ್ ದರ ಹೆಚ್ಚಳಕ್ಕೆ ಕಡಿವಾಣ ಹಾಕು ಬಗ್ಗೆಯೂ ಚರ್ಚೆ ಮಾಡುತ್ತೇನೆ ಎಂದು ಸಚಿವರು ಸ್ಪಷ್ಟಪಡಿಸಿದರು.