ರಾಣೆಬೆನ್ನೂರ

ಸಂಗೀತದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ -ಪ್ರಕಾಶಾನಂದಜಿ

ಸಂಗೀತದಿಂದ ಭಗವಂತನ ಸಾಕ್ಷಾತ್ಕಾರ ಸಾಧ್ಯ -ಪ್ರಕಾಶಾನಂದಜಿ

ರಾಣೀಬೆನ್ನೂರು 22: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಶಾಸ್ತ್ರೀಯ ಸಂಗೀತದ ಜೊತೆಗೆ ಜನರ ಭಾವನೆಗಳಿಗೆ ಜೀವ ತುಂಬುವ ಮತ್ತು ಸಾಹಿತ್ಯಕ್ಕೆ ಹೊಸರೂಪ ಮೆರಗು ನೀಡಲು ಸುಗಮ ಸಂಗೀತ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಲಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದಾಶ್ರಮದ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ಹೇಳಿದರು. 

ಅವರು ಇಲ್ಲಿನ ಗೌರಿಶಂಕರ ನಗರದ ಶ್ರೀ ಮಾತಾ ಸತ್ಸಂಗ ಕೇಂದ್ರದಲ್ಲಿ ಕುಪ್ಪೇಲೂರು ರಂಗ ಚೇತನ(ಪ.ಜಾ)ಸಂಸ್ಥೆಯು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಭಕ್ತಿಯ ಆರಾಧನೆ ಹಾಗೂ ಸಂಗೀತ ಮತ್ತು ಸಂಸ್ಕೃತಿಯ ಕಲೆ ಪ್ರಮುಖ ಪಾತ್ರ ವಹಿಸುತ್ತಲಿದೆ ಎಂದ ಶ್ರೀಗಳು ಭಗವಂತನ ಸಾಕ್ಷಾತ್ಕಾರ ಪಡೆಯಬೇಕಾದರೆ ನಿಷ್ಕಲ್ಮಶವಾದ ಭಕ್ತಿಯ ಜೊತೆಗೆ ಸಂಗೀತ ಆಸ್ವಾದನೆಯಿಂದ ಮಾತ್ರ ಸಾಧ್ಯವಾಗಲಿದೆ. ಸರ್ಕಾರ ನಮ್ಮ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕಲಾವಿಧರನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 

ಮುಖ್ಯ ಅತಿಥಿಗಳಾಗಿ ಖ್ಯಾತ ನೇತ್ರ ತಜ್ಞ ಡಾ.ಚಂದ್ರಶೇಖರ ಕೇಲಗಾರ, ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ ಮುಂಡರಗಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಸಂಜೆ 7 ರಿಂದ ಆರಂಭಗೊಂಡ ನಾಡಿನ ಖ್ಯಾತ ಕಲಾವಿದ ರಾಮಪ್ಪ ಕೋಟಿ ಹಾಳ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮವು ಮೂರು ತಾಸುಗಳ ಕಾಲ ಶ್ರೀಮಠದಲ್ಲಿ ಪಾಲ್ಗೊಂಡ ಭಕ್ತ ಸಮುದಾಯಕ್ಕೆ ಸಂಗೀತ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿ ಕಂಡಿತು.

ಸುದ್ದಿ ಓದಿ