ಕಾರವಾರ

ಕಾರವಾರ ನಗರಸಭೆಯ ಬಜೆಟ್ ಸಭೆ : 91,31 ಲಕ್ಷ ರೂ, ಉಳಿತಾಯದ ಬಜೆಟ್ ಮಂಡಿಸಿದ ಅಧ್ಯಕ್ಷ ಡಾ. ನಿತಿನ್ ಪಿಕಳೆ

ಕಾರವಾರ ನಗರಸಭೆಯ ಬಜೆಟ್ ಸಭೆ : 91,31 ಲಕ್ಷ ರೂ, ಉಳಿತಾಯದ ಬಜೆಟ್ ಮಂಡಿಸಿದ ಅಧ್ಯಕ್ಷ ಡಾ. ನಿತಿನ್ ಪಿಕಳೆ

ಕಾರವಾರ 11: ಇಲ್ಲಿನ ನಗರಸಭೆಯ 2021- 22ನೇ ಸಾಲಿನ 91,31,800.00 ರೂ.ಗಳ ಉಳಿತಾಯದ ಬಜೆಟ್ ಅನ್ನು ಅಧ್ಯಕ್ಷ ಡಾ.ನಿತಿನ್ ಪಿಕಳೆ  ನಗರಸಭೆಯ ಸಭಾಂಗಣದಲ್ಲಿ ಮಂಡಿಸಿದರು. ಕಾರವಾರ ನಗರಸಭೆಯ 2021- 22 ನೇ ಸಾಲಿನ ಆಯವ್ಯಯವನ್ನು ನಗರಸಭೆ ವ್ಯಾಪ್ತಿಯಲ್ಲಿ ಬರುವ 31 ವಾರ್ಡಿನ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಹಾಗೂ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ತಯಾರಿಸಲಾಗಿದೆ. ಮೂಲಭೂತ ಸೌಕರ್ಯಗಳನ್ನು ಹಾಗೂ ಸರಕಾರದ ಮಾರ್ಗಸೂಚಿಯಂತೆ ಬಜೆಟ್ ತಯಾರಿಸಲಾಗಿದ್ದು, ಒಟ್ಟೂ ವಾರ್ಷಿಕ ರೂ.42,69,31,2010 ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಮೊತ್ತದಲ್ಲಿ 41,77,99,400 ರೂ.ಗಳನ್ನು ಈ ಸಾಲಿನಲ್ಲಿ ಖರ್ಚು ಮಾಡಬಹುದಾಗಿದ್ದು, ರೂ 91,31,800 ಉಳಿತಾಯ ಮೊತ್ತದ ಆಯವ್ಯಯವನ್ನು ಮಂಡಿಸಲಾಗಿದೆ ಎಂದು ನಿತಿನ್ ಪಿಕಳೆ ತಿಳಿಸಿದರು.

ಈ ಆಯವ್ಯಯದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ಈ ಹೆಚ್ಚಿನ ಹಣವನ್ನು ಮೀಸಲಾಗಿಡಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ರಸ್ತೆಗಳ ನಿರ್ಮಾಣ ಹಾಗೂ ನವೀಕರಣಕ್ಕಾಗಿ 2.45 ಕೋಟಿ, ರಸ್ತೆ ಬದಿ ಚರಂಡಿ ನಿರ್ಮಾಣ, ನಿರ್ವಹಣೆಗಾಗಿ ಹಾಗೂ ಚರಂಡಿಗಳಿಗೆ ಸ್ಲ್ಯಾಬ್ ಹಾಕಲು 2.50 ಕೋಟಿ, ಚರಂಡಿ ಹೂಳು ತೆಗೆಯಲು 50 ಲಕ್ಷ, ಗಾರ್ಡನ್ ಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ಒಂದು ಕೋಟಿ, ಬೀದಿ ದೀಪಗಳ ಜೋಡಣೆಗಾಗಿ 70 ಲಕ್ಷ, ನೀರು ಪೂರೈಕೆಗೆ ಹೊಸ ಪೈಪ್ ಲೈನ್ ಹಾಗೂ ಆರ್ ಓ ಘಟಕ ನಿರ್ಮಾಣಕ್ಕೆ 80 ಲಕ್ಷ, ಒಳಚರಂಡಿ ನಿರ್ಮಾಣಕ್ಕಾಗಿ ಎರಡು ಕೋಟಿ, ಸ್ವಚ್ಛ ಭಾರತ್ ಮಿಶನ್, ಡಿ.ಪಿ.ಆರ್ ಯೋಜನೆಯಡಿ ಎಸ್.ಡಬ್ಲೂ.ಎಮ್ ಕಾಮಗಾರಿಗಳಿಗೆ ಒಂದೂವರೆ ಕೋಟಿ, ನಗರದಲ್ಲಿ ಪಾಕಿರ್ಂಗ್ ವ್ಯವಸ್ಥೆ ಕೈಗೊಳ್ಳಲು 5 ಲಕ್ಷ, ನಗರಸಭಾ ಕಚೇರಿ ಹೊಸ ಕಟ್ಟಡದಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಗೆ ವಾಣಿಜ್ಯ ಸಂಕೀರ್ಣ, ಬಿಣಗಾ ಮೀನು ಮಾರುಕಟ್ಟೆ ನವೀಕರಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣ ಹಾಗೂ ಹಿಂದೂ ಹೈಸ್ಕೂಲ್ ಹತ್ತಿರ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮೂರು ಕೋಟಿ, ಎಲ್ಲಾ ವಾರ್ಡಗಳಲ್ಲಿ ನಾಮಫಲಕ ಅಳವಡಿಸಲು 10 ಲಕ್ಷ ಕಾದಿರಿಸಲಾಗಿದೆ.

ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 20 ಲಕ್ಷ, ಸ್ಮಶಾನ ಅಭಿವೃದ್ಧಿ ಹಾಗೂ ದುರಸ್ತಿಗಾಗಿ 35 ಲಕ್ಷ, ಲಘು ವಾಹನಗಳ ಖರೀದಿಗಾಗಿ,  ಮೌಂಟೆನ್ ವಾಹನ, ರೆಸ್ಕ್ಯೂ ವಾಹನ ಹಾಗೂ ಆಟೋ ಟಿಪ್ಪರ್ ಖರೀದಿಸಲು 52 ಲಕ್ಷ, ಮಶೀನರಿ ಖರೀದಿಸಲು, ಬೀದಿ ಗುಡಿಸುವ ವಾಹನ, ಫಾಗಿಂಗ್ ಮಶೀನ್ ಗಾಗಿ 20 ಲಕ್ಷ, ಅಧ್ಯಕ್ಷರಿಗಾಗಿ ವಾಹನ ಖರೀದಿಗೆ 30 ಲಕ್ಷ, ನೀರು ಸರಬರಾಜು ದುರಸ್ತಿ ಕಾಮಗಾರಿಗಳಿಗಾಗಿ 26 ಲಕ್ಷ, ನೈರ್ಮಲ್ಯ ಸಾಮಗ್ರಿ ಖರೀದಿಗಾಗಿ 15 ಲಕ್ಷ, ಜಲಮಂಡಳಿಯವರಿಂದ ನೀರು ಖರೀದಿಗಾಗಿ 80 ಲಕ್ಷ, ಶೌಚಾಲಯಗಳ ದುರಸ್ತಿಗಾಗಿ 20 ಲಕ್ಷ, ಬೀದಿ ದೀಪ ನಿರ್ವಹಣೆಗಾಗಿ 72 ಲಕ್ಷ, ಬೀದಿ ದೀಪ ದುರಸ್ತಿಗಾಗಿ 10 ಲಕ್ಷ, ಇಲಾಖೆ ವಾಹನಗಳ ದುರಸ್ತಿಗಾಗಿ 15 ಲಕ್ಷ, ನಗರಸಭೆಯಿಂದ ನೀಡಬಹುದಾದ ದೇಣಿಗೆಗಳಿಗಾಗಿ 4 ಲಕ್ಷ, ಬೀದಿ ದೀಪದ ವಿದ್ಯುತ್ ಬಿಲ್ ಪಾವತಿಗಾಗಿ 5.76 ಕೋಟಿ, ಕಛೇರಿಯ ಪೀಠೋಪಕರಣಗಳ ಖರೀದಿಗಾಗಿ 5 ಲಕ್ಷ, ನಗರ ವ್ಯಾಪ್ತಿಯಲ್ಲಿಯ ಪ.ಜಾತಿ, ಪ.ಪಂಗಡದ ಜನರ ಕಲ್ಯಾಣಕ್ಕಾಗಿ 75.50 ಲಕ್ಷ, ನಗರ ವ್ಯಾಪ್ತಿಯ ಬಡ ಜನರ ಕಲ್ಯಾಣಕ್ಕಾಗಿ 13.50 ಲಕ್ಷ, ಅಂಗವಿಕಲರ ಕಲ್ಯಾಣಕ್ಕಾಗಿ 10.76 ಲಕ್ಷ, ಸಿಬ್ಬಂದಿಗಳ ವೇತನ ಪಾವತಿಗಾಗಿ 3.84 ಕೋಟಿ, ಕೌನ್ಸಿಲ್ ಸಂಬಂಧಿಸಿದ ವೆಚ್ಚಗಳಿಗಾಗಿ 20 ಲಕ್ಷ, ಇಲಾಖೆಯ ವಾಹನಗಳಿಗೆ ಇಂಧನ ಪೂರೈಸಲು 40 ಲಕ್ಷ, ವಾಹನಗಳ ಬಾಡಿಗೆ ಪಾವತಿಗಾಗಿ 10 ಲಕ್ಷ, ಹೊರಗುತ್ತಿಗೆ ಬೀದಿ ಗುಡಿಸಲು ಪೌರಕಾರ್ಮಿಕರ, ವಾಹನ ಚಾಲಕರ ಪೂರೈಕೆ ಹಾಗೂ ಎಸ್.ಟಿ.ಪಿ ನಿರ್ವಹಣೆಗೆ ಎರಡು ಕೋಟಿ, ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್, ಇಂಜಿನಿಯರ್ ಗಳ ವೇತನಕ್ಕೆ 22 ಲಕ್ಷ, ಹೊರಗುತ್ತಿಗೆ ವಾಲ್ಮೆನ್‍ಗಳ ವೇತನ ಪಾವತಿಗಾಗಿ 20 ಲಕ್ಷ, ಕೆ.ಯು.ಐ.ಡಿ.ಎಫ್.ಸಿಯಿಂದ ಪಡೆದ ಸಾಲ ಪಾವತಿಗೆ 50 ಲಕ್ಷ, ವಕಾಲತ್ತು ಫೀ, ಮೂರನೇ ಪಾರ್ಟಿ ಫೀ, ಸೀನಿಯರ್ ಪ್ರೋಗ್ರಾಮರ್ ವೇತನ ಹಾಗೂ ಲೆಕ್ಕ ಪರಿಶೋಧನಾ ಫೀ 28 ಲಕ್ಷ, ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗಾಗಿ ಹಾಗೂ ಬಿಡಾಡಿ ದನಗಳನ್ನು ಸಾಗಿಸಲು 25 ಲಕ್ಷ, ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು 4 ಲಕ್ಷ ಹಾಗೂ ನಗರ ವ್ಯಾಪ್ತಿಯಡಿ ಹಸಿರೀಕರಣಕ್ಕಾಗಿ, ಗಿಡ ನೆಡುವುದಕ್ಕೆ 20 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು. ಈ ಆಯವ್ಯಯವನ್ನು ನಗರ ವ್ಯಾಪ್ತಿಯ ಎಲ್ಲಾ ಜನರ ಬೇಡಿಕೆಗಳಿಗೆ ಸ್ಪಂದಿಸಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡುತ್ತಿರುವ ಅನುದಾನ ಹಾಗೂ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿ ಓದಿ