ಕಾರವಾರ

ಬೆಲೆ ಬಾಳುವ ನಿವೇಶನ ಅತಿಕ್ರಮಣ ತಡೆದ ಪೌರಾಯುಕ್ತ: ನಗರಸಭೆ ಅಧೀನ ಎಂಬ ನಾಮಫಲಕ ಅಳವಡಿಕೆ

ಬೆಲೆ ಬಾಳುವ  ನಿವೇಶನ ಅತಿಕ್ರಮಣ ತಡೆದ ಪೌರಾಯುಕ್ತ: ನಗರಸಭೆ ಅಧೀನ ಎಂಬ ನಾಮಫಲಕ ಅಳವಡಿಕೆ
Municipal Commissioner prevents encroachment on valuable land: Installation of nameplate stating "Su

ಬೆಲೆ ಬಾಳುವ  ನಿವೇಶನ ಅತಿಕ್ರಮಣ ತಡೆದ ಪೌರಾಯುಕ್ತ: ನಗರಸಭೆ ಅಧೀನ ಎಂಬ ನಾಮಫಲಕ ಅಳವಡಿಕೆ  

ಕಾರವಾರ 15: ದಾಂಡೇಲಿ ನಗರಸಭೆಯ ಹೃದಯಭಾಗದ  ನಿವೇಶನ ಅತಿಕ್ರಮಣ ತಡೆದಿರುವ ನಗರಸಭೆ ಶನಿವಾರ , ತನ್ನ ಅಧೀನ ಆಸ್ತಿ ಎಂದು ನಾಮಫಲಕ ಅಳವಡಿಸಿದೆ. ಅಲ್ಲದೇ ಅತಿಕ್ರಮಣ ಮಾಡಿದಲ್ಲಿ ಕಾನೂನಿನಂತೆ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಪೌರಾಯುಕ್ತರು ನಾಮಫಲಕ  ಅಳವಡಿಸಿದ್ದಾರೆ. ಈಚಿನ  ವರ್ಷಗಳಿಂದ ದಾಂಡೇಲಿ  ನಗರ ನಡೆಯುತ್ತಿದ್ದ ಅವ್ಯವಹಾರ, ಪ್ರಭಾವಿಗಳಿಂದ ಭೂ  ಕಬಳಿಕೆ, ಹಾಗೂ ಆಶ್ರಯ ಯೋಜನೆಯಲ್ಲಿ  ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಲೋಕಾಯುಕ್ತರು ತನಿಖೆಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಇದರ ಬೆನ್ನಲ್ಲೆ ಎಚ್ಚೆತ್ತು ಕೊಂಡಿರುವ  ದಾಂಡೇಲಿ ನಗರಸಭೆಯ ಪೌರಾಯುಕ್ತ  ವಿವೇಕ ಬನ್ನೆ  ಕಾನೂನು ಮೀರಿದ ಕೆಲಸಗಳಿಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.  ಹಳಿಯಾಳ ಜೊಯಿಡಾ ಶಾಸಕರಾದ  ಆರ್‌.ದೇಶಪಾಂಡೆ  ಅವರ ಸೂಚನೆ ಅನುಸರಸಿ,   ದಾಂಡೇಲಿ  ನಗರದಲ್ಲಿ ಭೂಮಿ ಅತಿಕ್ರಮಣಕ್ಕೆ ಮೊದಲ ಬಾರಿಗೆ  ಹೆಜ್ಜೆ ಇಟ್ಟಿರುವ ಪೌರಾಯುಕ್ತರು ,  ಬೆಲೆಬಾಳುವ ನಿವೇಶನಗಳ ಅತಿಕ್ರಮಣವನ್ನು ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ನಗರಸಭೆಯ ಆಸ್ತಿಗಳನ್ನು ಅತಿಕ್ರಮಣ ಮಾಡಿದರೆ,   ಕಾನೂನಿನ ಜಾಲಕ್ಕೆ ಸಿಲುಕಲಿದ್ದಾರೆ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.   “ಇದು ನಗರಸಭೆಯ ಆಸ್ತಿ ಹಿ ಅತಿಕ್ರಮಿಸಿದರೆ ಕಾನೂನು ಕ್ರಮ” ಎಂಬ ಬೋರ್ಡ್ಗಳನ್ನು ಹಾಕುವ ಮೂಲಕ ನಗರಸಭೆ  ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಹೆಜ್ಜೆ ಇಟ್ಟಿದ್ದಾರೆ.ನಾಲ್ಕೈದು ದಿನದ ಹಿಂದೆ  ಯುಟ್ಯೂಬರ್ ಪತ್ರಕರ್ತ, ತನ್ನ  ಪತ್ನಿ ಪದ್ಮಶ್ರೀ ಇವರ ಹೆಸರಿನಲ್ಲಿ, ಹಿಂದಿನ ಪೌರಾಯುಕ್ತರಿಂದ ಅಕ್ರಮ ನಿವೇಶನ ಹಂಚಿಕೆ ಪತ್ರ ತೆಗೆದುಕೊಂಡಿದ್ದು, ಯಾವುದೇ ದಾಖಲೆ, ಅನುಮತಿ ಇಲ್ಲದೆ ಬೆಲೆ ಬಾಳುವ  ಸೈಟ್  ಕಬಳಿಸಿದ್ದ ಪ್ರಕರಣ, ದಾಂಡೇಲಿಯಲ್ಲಿ ದೊಡ್ಡ  ಸುದ್ದಿಯಾಗಿತ್ತು. ಈ ಅಕ್ರಮದ ವಿರುದ್ಧ ಸ್ಥಳೀಯ ಮಹಿಳೆಯರು  ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ, ಪರಿಣಾಮ ,  ಜಾಗೃತರಾದ  ಅಧಿಕಾರಿಗಳು  ಶುಕ್ರವಾರ ಅತಿಕ್ರಮಣ ತೆರವುಗೊಳಿಸಿದ್ದರು.ದಾಂಡೇಲಿಯಲ್ಲಿ ಅಕ್ರಮ ನಿವೇಶನ ಹಂಚಿಕೆ ಎಷ್ಟು ? : ದಾಂಡೇಲಿಯಲ್ಲಿ ಸುಮಾರು 12,000 ಕುಟುಂಬಗಳು ಮನೆ ಅಥವಾ  ನಿವೇಶನವನ್ನೋ ಹೊಂದಿವೆ.  ಆಶ್ರಯ ಯೋಜನೆ, ಕೊಳಚೆ ನಿರ್ಮೂಲನಾ ಮಂಡಳಿ ಮನೆ ನಿರ್ಮಾಣ ಯೋಜನೆ, ಜಿ + 2 ಯೋಜನೆ, ಕೆಎಚ್ ಬಿ ಸೈಟ್ ಮಾರಾಟ   ಯೋಜನೆಗಳಲ್ಲಿ 7,500 ನಿವೇಶನ ಹಾಗೂ ಮನೆಗಳು  ಈತನಕ ಹಂಚಿಕೆಯಾಗಿವೆ.  ಇನ್ನೂ 3,000 ಹೊಸ ಅರ್ಜಿಗಳು ನಿವೇಶನ ಬೇಡಿಕೆಗಾಗಿ ನಗರಸಭೆಯಲ್ಲಿ  ಬಾಕಿಯಿದೆ.ಮನೆಗಳ  ಮೂಲ  ಹಂಚಿಕೆಯ ವಿಧಾನ ಹಾಗೂ ಅರ್ಹತೆಗಳ ಬಗ್ಗೆ ದೊಡ್ಡ ಸಂಶಯಗಳಿದ್ದು,ಪೌರಾಯುಕ್ತ ಜತ್ತಣ್ಣ ಅವಧಿ ನಂತರ, ಅಧಿಕಾರ ವಹಿಸಿಕೊಂಡ   ಪೌರಾಯುಕ್ತ ಗಣಪತಿ ಶಾಸ್ತ್ರಿ ಸರ್ಕಾರಕ್ಕೆ  ನೀಡಿದ ವರದಿ ಆಧಾರದ ಮೇಲೆ ಲೋಕಾಯುಕ್ತದಲ್ಲಿ  1,600 ಕ್ಕೂ ಹೆಚ್ಚು ನಿವೇಶನ ಹಂಚಿಕೆ ಪ್ರಕರಣಗಳ ವಿಚಾರಣೆ ಆರಂಭಿಸಿದೆ ಎಂಬುದು ಗಮನಾರ್ಹ. ವಿವಿಧ ಯೋಜನೆಗಳ ಹಂಚಿಕೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ  ಅವರ ಖಚಿತ ಆರೋಪವಾಗಿದೆ.  ದಾಂಡೇಲಿ ನಗರಕ್ಕೆ ಮೊದಲು ರೂಪಿಸಿದ  ಮಾಸ್ಟರ್ ಪ್ಲಾನ್ ಪ್ರಕಾರವೇ ನಿವೇಶನಗಳನ್ನು ಹಂಚಿಕೆ ಯಾಗಬೇಕಿತ್ತು .  ಆದರೆ  ಅದನ್ನು ಉಲ್ಲಂಘಿಸಿ, ಬೆಲೆಬಾಳುವ  ಸೈಟ್ ಗಳನ್ನು ಕಬಳಿಸುವ ಕೆಲಸ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.  ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಕಾರವಾರ  ಲೋಕಾಯುಕ್ತಕ್ಕೆ ಸಲ್ಲಿಸಿರುವ  ಅಫಿಡವಿಟ್ ಸಹಿತ ದೂರು  ಆಧಾರದ ಮೇಲೆ, ಈಗ ಹಲವಾರು ಭೂಗಳ್ಳರ ಎದೆಗಳಲ್ಲಿ ನಡುಕ ಶುರುವಾಗಿದೆ. ಪೌರಾಯುಕ್ತ ವಿವೇಕ ಬನ್ನೆ ಅವರು ನಗರಸಭೆಯ ಆಸ್ತಿಗಳ ರಕ್ಷಣೆ ಮತ್ತು ಅತಿಕ್ರಮಣ ತೆರವು ಮಾಡುವುದುರ ಜೊತೆಗೆ , ಅಕ್ರಮ ಸೈಟ್ ಕಬಳಿಕೆ ವಿರುದ್ಧ ಕಾನೂನು ಕ್ರಮಗಳ ಮೂಲಕ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು, ಈ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ........ 


ಸುದ್ದಿ ಓದಿ