ನವಜಾತ ಶಿಶುಗಳ ಆರೈಕೆಗೆ ತಾಯಂದಿರು ವಿಶೇಷ ಗಮನಹರಿಸಿ: ಶಿವಾನಂದ ವಿ.ಪಿ.
ಬಳ್ಳಾರಿ 20: ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಜನನದ ಮೊದಲ 28 ದಿನಗಳು ಅತ್ಯಂತ ಮಹತ್ವದಾಗಿದ್ದು, ಈ ಅವಧಿಯಲ್ಲಿ ತಾಯಂದಿರು ಮಕ್ಕಳ ಆರೈಕೆಗೆ ವಿಶೇಷ ಗಮನಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಆರ್ಸಿಎಚ್ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಂಪ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಕಂಪ್ಲಿ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಕಂಪ್ಲಿಯ 4ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ನವಜಾತ ಶಿಶು ಆರೈಕೆ ಸಪ್ತಾಹದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ನವೆಂಬರ್ 15 ರಿಂದ 21 ರವರೆಗೆ ನವಜಾತ ಶಿಶು ಆರೈಕೆ ಸಪ್ತಾಹ ಆಚರಿಸಲಾಗುತ್ತದೆ. ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಜನನದ ಮೊದಲ 28 ದಿನಗಳಲ್ಲಿ ನವಜಾತ ಶಿಶುಗಳಿಗೆ ಉತ್ತಮ ಆರೋಗ್ಯ ಮತ್ತು ಸುರಕ್ಷಿತ ಆರೈಕೆ ಒದಗಿಸುವ ಕುರಿತು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಮಗು ಜನಿಸಿದ ಒಂದು ಗಂಟೆಯೊಳಗೆ ತಾಯಿಯ ಮೊದಲ ಹಾಲಾದ ಕೊಲೊಸ್ಟ್ರಮ್ ನೀಡಬೇಕು. ಆರು ತಿಂಗಳವರೆಗೆ ಕೇವಲ ತಾಯಿಯ ಎದೆಹಾಲನ್ನೇ ನೀಡಬೇಕು. ಮಗುವಿನ ಹಸಿವಿಗೆ ಅನುಗುಣವಾಗಿ ದಿನಕ್ಕೆ 10 ರಿಂದ 12 ಬಾರಿ ಹಾಲುಣಿಸಬೇಕು. ಮಗುವಿಗೆ ಜನಿಸಿದ ತಕ್ಷಣ ಸ್ನಾನ ಮಾಡಿಸದೆ, ತಾಯಿಯ ಎದೆಯ ಮೇಲೆ ಚರ್ಮದಿಂದ ಚರ್ಮಕ್ಕೆ ತಾಗುವಂತೆ ಇರಿಸಿ ಕಾಂಗರೂ ಆರೈಕೆ ಮಾಡಬೇಕು. ಮಗುವಿನ ದೇಹದ ಉಷ್ಣತೆ ಕಾಪಾಡಲು ಸ್ವಚ್ಛವಾದ ಬಟ್ಟೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಅದೇ ರೀತಿ ಮಗುವನ್ನು ಮುಟ್ಟುವ ಮುನ್ನ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ಯಾವುದೇ ಎಣ್ಣೆ ಅಥವಾ ಪುಡಿಗಳನ್ನು ಹಚ್ಚಬಾರದು. ಮಗುವನ್ನು ಸಮತಟ್ಟಾದ ಹಾಗೂ ದೃಢವಾದ ಹಾಸಿಗೆಯ ಮೇಲೆ ಮಲಗಿಸಬೇಕು. ಜನನದ ನಂತರ ನೀಡಬೇಕಾದ ಬಿಸಿಜಿ, ಒಪಿವಿ ಹಾಗೂ ಹೆಪಟೈಟಿಸ್-ಬಿ ಲಸಿಕೆಗಳನ್ನು ತಪ್ಪದೇ ಹಾಕಿಸಿ, ನಿಗದಿತ ವೇಳಾಪಟ್ಟಿಯಂತೆ ಮುಂದಿನ ಎಲ್ಲಾ ಲಸಿಕೆಗಳನ್ನು ಕೊಡಿಸಬೇಕು ಎಂದು ತಿಳಿಸಿದರು.
ನವಜಾತ ಶಿಶು ಸರಿಯಾಗಿ ಹಾಲು ಕುಡಿಯದಿರುವುದು, ದೇಹ ತಣ್ಣಗಾಗುವುದು ಅಥವಾ ವಿಪರೀತ ಜ್ವರ ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ, ಚರ್ಮ ಅಥವಾ ಕಣ್ಣು ಹಳದಿಯಾಗುವುದು, ನಿರಂತರ ಅಳುವುದು, ಮಂಕಾಗಿರುವುದು ಹಾಗೂ ಮೂತ್ರ ವಿಸರ್ಜನೆ ಮಾಡದಿರುವಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ತಾಯಂದಿರಿಗೆ ಎಚ್ಚರಿಕೆ ನೀಡಿದರು.