ಕಾರವಾರ

ಪಂಜರು ಕೃಷಿ ಇಂದಿನ ಅಗತ್ಯ: ಎಸ್.ಪುರುಷೋತ್ತಮ

ಪಂಜರು ಕೃಷಿ ಇಂದಿನ ಅಗತ್ಯ: ಎಸ್.ಪುರುಷೋತ್ತಮ

ಕಾರವಾರ 28:  ಸಮುದ್ರ ಮೀನುಗಾರಿಕೆಗೆ ಪರ್ಯಾಯವಾಗಿ ಪಂಜರು ಕೃಷಿಯನ್ನು ಸಹ ಸಣ್ಣ ಸಣ್ಣ ಮೀನುಗಾರರು ಮಾಡುವ ಅವಶ್ಯಕತೆಯಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಪುರುಷೋತ್ತಮ ಅಭಿಪ್ರಾಯಪಟ್ಟರು. ಇಲ್ಲಿನ  ಭೋವಿವಾಡದ ಸುಂಕೇರಿಯಲ್ಲಿ  ಕಾಳಿ ನದಿಯ ದಂಡೆಯಲ್ಲಿ  ಪರಿಶಿಷ್ಟ ಜಾತಿ  ಯುವ ಸಂಘ ದಿಂದ ಪಂಜರು ಮೀನು ಕೃಷಿಗೆ ಚಾಲನೆ ನೀಡಿ ಮಾತನಾಡಿದರು.  

ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಹಲವು ಯೋಜನೆಗಳ ಪ್ರಯೋಜನವನ್ನು ಸ್ಥಳೀಯರು ಪಡೆಯಬೇಕು. ಹಾಗೂ ಅವರ ಮಾರ್ಗದರ್ಶನದಲ್ಲಿ ಪಂಜರು ಕೃಷಿ ಬೆಳೆಸಬೇಕು. ಇದರಿಂದ ನಿರ್ದಿಷ್ಟ ಆದಾಯವನ್ನು ಮೀನುಗಾರರು ನಿರೀಕ್ಷಿಸಬಹುದು. ಅದು ಸಮುದ್ರ ಮೀನುಗಾರಿಕೆಯ ಅಸ್ಥಿರತೆಯ ನಡುವೆ ಈಗ ಪಂಜರು ಕೃಷಿ ಬದುಕಿಗೆ ಪರ್ಯಾಯವಾಗಿದೆ. ಆಧುನಿಕ ಮೀನುಗಾರಿಕೆಯನ್ನು ಮೀನು ಕೃಷಿಕರು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ನಂತರ ಅವರು  ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಹಾಗೂ ಗುಂಪಿನ ಸದಸ್ಯರೊಂದಿಗೆ ಯೋಜನೆಯ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಪಂಜರ ಕೃಷಿಗೆ ಸಂಭಂದಿಸಿದ ಹೆಚ್ಚುವರಿ ಸಾಮಗ್ರಿಗಳನ್ನು  "ಆರ್ಯ ಯುವ ಸಂಘ" ದ ಸದಸ್ಯರುಗಳಿಗೆ ವಿತರಿಸಿದರು. ಸಂಶೋಧನಾ ಕೇಂದ್ರದ ಪ್ರಭಾರಿ ವಿಜ್ಞಾನಿ ಡಾ. ಜಯಶ್ರೀ ಲೋಕಾ ಪರಿಶಿಷ್ಟ ಜಾತಿ-ಉಪ ಯೋಜನೆ ಈ ಯೋಜನೆಯ ಕುರಿತು ವಿವರಣೆ ನೀಡಿದರು. 

ಹಿರಿಯ ವಿಜ್ಞಾನಿ ಡಾ. ಸುರೇಶ ಬಾಬು ಪಿ.ಪಿ., ಯೋಜನೆಯ ಉಸ್ತುವಾರಿ  ವಿಜ್ಞಾನಿ ಡಾ. ಅನುರಾಜ್ ಎ., ತಾಂತ್ರಿಕ ಅಧಿಕಾರಿ ಡಾ. ಪ್ರವೀಣ ಎನ್. ದುಬೆ ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ನಾರಾಯಣ ಜಿ. ವೈದ್ಯ ಹಾಜರಿದ್ದು ಉಪ ನಿರ್ದೇಶಕರೊಂದಿಗೆ ಸಂವಹನ ನಡೆಸಿದರು ಹಾಗೂ ಪಂಜರದ ನಿರ್ವಹಣೆ ಮತ್ತು ವ್ಯವಸ್ಥೆಗಳ ಕುರಿತು ವಿವರಿಸಿದರು.   ಭಾರತೀಯ ಕೃಷಿ ಸಂಶೋಧನಾ ಪರಿಷತ್ತು-ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ, ಕಾರವಾರ ಪ್ರಾದೇಶಿಕ ಕೇಂದ್ರ, ಕಾರವಾರ ಇದರ ವತಿಯಿಂದ ಜಾರಿಗೊಳಿಸಲ್ಪಟ್ಟಿರುವ  ಪರಿಶಿಷ್ಟ ಜಾತಿ-ಉಪ ಯೋಜನೆ ಈ ಯೋಜನೆಯ ಅಡಿಯಲ್ಲಿ ಕಬ್ಬಿಣದ ಎರಡು ಪಂಜರಗಳನ್ನು ಗುಂಪಿಗೆ ನೀಡಲಾಗಿತ್ತು.

ಸುದ್ದಿ ಓದಿ