ನಿಮ್ಮೂರಾಗೆನ ಮರ್ಯಾದೆ ಐತಿಲ್ಲೊ, ಸುಮ್ಮನಿದ್ರ ಸಭೆ ಮಾಡ್ತಿವಿ ಇರಲಿಕ್ಕಂದ್ರ ಬಿಟ್ಟ ಹೊಕ್ತಿವಿ
ಕಾಂಗ್ರೇಸ್ ಕಾರ್ಯಕರ್ತರಿಗೆ ಗದರಿದ ಸಚಿವ ತಿಮ್ಮಾಪೂರ
ಜಮಖಂಡಿ 29: ನಿಮ್ಮೂರಾಗೆನ ಮರ್ಯಾದೆ ಐತಿಲ್ಲೊ, ನಿಮ್ಮೂರಾಗ ಗಲಾಟೆ ಮಾಡಿಕೊಂಡ್ರ ಏನ ಮರ್ಯಾದೆ ಉಳಿತೈತಿ, ಸುಮ್ಮನಿದ್ರ ಸಭೆ ಮಾಡ್ತಿವಿ ಇರಲಿಕ್ಕಂದ್ರ ಬಿಟ್ಟ ಹೊಕ್ತಿವಿ, ಮಿನಿಸ್ಟರ್ನ ಕರೆದುಕೊಡು ಬಂದು ಹಿಂಗ ಮಾಡಿದ್ರೆ ಮಾನ ಮರ್ಯಾದೆ ಇಲ್ವೆನ್ರೀ್ರ ನಿಮಗೆ, ಸಭೆ ಮಾಡೋನು ಬೇಡ್ವೋ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ಗದರಿಸಿದ ಘಟನೆ ಜರುಗಿತು.
ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದ ನೂತನ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಉಂಟಾದ ಕೂಗಾಟ, ಚಿರಾಟ, ಜಗ್ಗಾಟ್ಟದ ನಡುವೆ ಗೊಂದಲದ ವಾತಾವರಣದಲ್ಲಿ ಸಚಿವರು ಗರಂ ಆದರು.
ಮುಖಂಡ ಸುಶೀಲಕುಮಾರ ಬೆಳಗಲಿ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಆನಂದ ನ್ಯಾಮಗೌಡ ಅವರ ಬೆಂಬಲಿಗರು ಗಲಾಟೆ ಪ್ರಾರಂಭಿಸುತಿದ್ದಂತೆ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಸೃಷ್ಠಿಯಾಯಿತು.
ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ ಮಾತನಾಡಿ, ಇದು ಪಕ್ಷದ ಕಾರ್ಯಕ್ರಮ ಅಲ್ಲ, ಸರ್ಕಾರಿ ಕಾರ್ಯಕ್ರಮ, ನಾವು ಯಾರನ್ನು ಕರೆತಿವಿ ಅವರಷ್ಟೆ ವೇದಿಕೆಗೆ ಮೇಲೆ ಬನ್ನಿ ಎಂದು ಗೊಂದಲಕ್ಕೆ ತೆರೆ ಎಳೆದರು.
ಘಟನೆ ವಿವರ:
ಸಾವಳಗಿ ಗ್ರಾಮದ ನೂತನ ಬಸ್ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಪಕ್ಕದ ಕುರ್ಚಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಸುಶಿಲಕುಮಾರ ಬೆಳಗಲಿ ಕುಳಿತುಕೊಂಡಿದ್ದರು, ಜಮಖಂಡಿ ನಗರಸಭೆ ಅಧ್ಯಕ್ಷ ಪರಮಾನಂದ ಗವರೋಜಿ ಅವರಿಗೆ ಕುಳಿತುಕೊಳ್ಳಲು ಆಸನ ಇರಲಿಲ್ಲ, ಇದನ್ನು ಗಮನಿಸಿದ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ತಮ್ಮ ಆಸನವನ್ನೆ ಬಿಟ್ಟು ಕೊಟ್ಟರು, ಇದಕ್ಕೆ ಸುಶಿಲಕುಮಾರ ಬೆಳಗಲಿ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಆನಂದ ನ್ಯಾಮಗೌಡ ಬೆಂಬಲಿಗರು ವೇದಿಕೆಗೆ ನುಗ್ಗಲು ಯತ್ನಿಸಿದ್ದರಿಂದ ಕೆಲಕಾಲ ಕಾರ್ಯಕ್ರಮದಲ್ಲಿ ಕೂಗಾಟ, ಚಿರಾಟದ ಗೊಂದಲದ ವಾತಾವರಣ ಸೃಷ್ಠಿಯಾಯಿತು.
ಸಚಿವ ತಿಮ್ಮಾಪೂರ ಅವರು, ಸರಕಾರಿ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಯಾರದು ಹೆಸರು ಇರುತ್ತದೆ. ಅವರಷ್ಟೇ ವೇದಿಕೆಯ ಮೇಲೆ ಕುಳಿತುಕೊಳ್ಳಬೇಕು ಎಂದರು.
ಅದನ್ನು ಅರಿತ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ವೇದಿಕೆಯಿಂದ ಕೆಳಗೆ ಇಳಿದರು. ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಕೆಳಗಿಳಿದು ಸಾರ್ವಜನಿಕರ ಆಸನದಲ್ಲಿ ಕುಳಿತುಕೊಂಡರು, ಇದಕ್ಕೆ ಸಚಿವ ತಿಮ್ಮಾಪೂರ ಅವರು ಗೊಂದಲವನ್ನು ತಿಳಿಗೊಳಿಸಿ ಆನಂದ ನ್ಯಾಮಗೌಡ ಅವರನ್ನು ಮತ್ತೇ ವೇದಿಕೆಗೆ ಆಹ್ವಾನಿಸಿದರು.
ಇಷ್ಟಕ್ಕೂ ಸುಮ್ಮನಾಗದ ಸುಶಿಲಕುಮಾರ ಬೆಳಗಲಿ ಮತ್ತೆ ವೇದಿಕೆಯಲ್ಲಿ ಆಸಿನರಾಗಿದ್ದರು. ಇದನ್ನು ಗಮನಿಸಿದ ಮಾಜಿ ಶಾಸಕ ಆನಂದ ನ್ಯಾಮಗೌಡ ವೇದಿಕೆಯಿಂದ ಮತ್ತೇ ಕೆಳಗಿಳಿದು ಸಭೆಯಿಂದ ಹೊರಟು ಹೊದ ಘಟನೆ ನಡೆಯಿತು.
ಸಾವಿರ ಚಾಲಕ, ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ, ಈಗಾಗಲೆ 1 ಸಾವಿರ ಸಿಬ್ಬಂದಿಗಳ ನೇಮಕಾತಿ ಪ್ರತಿಕ್ರೀಯೆ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗುವದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದ ನೂತನ ಬಸ್ ನಿಲ್ದಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಬ್ಬಂದಿಗಳ ಅಪಘಾತ ಪರಿಹಾರವನ್ನು ನಾವು 1 ಕೋಟಿ ರೂಗೆ ಹೆಚ್ಚಿಸಿದ್ದೆವೆ, ಇಷ್ಟು ದೊಡ್ಡದ ಮೊತ್ತ ಆರ್ಮಿಯಲ್ಲೂ ನೀಡುವದಿಲ್ಲ, ನೂತನ ಹೊಸ ಬಸ್ಸುಗಳನ್ನು ತೆಗೆದುಕೊಳ್ಳುತಿದ್ದೆವೆ, ಸಾರಿಗೆ ಇಲಾಖೆಯನ್ನು ಬಹಳಷ್ಟು ಸುಧಾರಣೆ ಮಾಡುತಿದ್ದೆವೆ ಎಂದರು.
ಸಾವಳಗಿಯಲ್ಲಿ ಡಿಪೊ ನಿರ್ಮಿಸಲು ಜಾಗೆ ನೀಡಿದರೆ ಅವಶ್ಯಕತೆ ಅನುಸಾರವಾಗಿ ನಿರ್ಮಿಸಲಾಗುವುದು ಎಂದರು.
ವೇದಿಕೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ವಾಕಸಾಸಂಸ್ಥೆ ಉಪಾಧ್ಯಕ್ಷ ಪೀರಸಾಬ್ ಕೌತಾಳ, ಗ್ರಾಪಂ ಅಧ್ಯಕ್ಷೆ ಕವಿತಾ ಪಾಟೋಳಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಇದ್ದರು. ಜಿಲ್ಲಾ ಸಾರಿಗೆ ಅಧಿಕಾರಿ ಪಿ.ವಿ.ಮೆತ್ರಿ ಸ್ವಾಗತಿಸಿದರು.